ಹಾನಗಲ್: ಡಿ.ಕೆ. ಶಿವಕುಮಾರ್ ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಅವರಿಗೆ ಗೊತ್ತಿರುವುದು ಒಂದೇ ಒಂದು ಗೋಣಿಚೀಲದಲ್ಲಿ ಹಣ ತರುವುದು. ಕತ್ತಲರಾತ್ರಿ ಮಾಡುವುದು..!
ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿ.ಕೆ. ಶಿವಕುಮಾರ್ ಅವರನ್ನು ಉಪಚುನಾವಣೆ ಪ್ರಚಾರದಲ್ಲಿ ತರಾಟೆಗೆ ತೆಗೆದುಕೊಂಡ ರೀತಿ.
ಹಾನಗಲ್ ವಿಧಾನಸಭಾ ಕ್ಷೇತ್ರದ ಯಳವಟ್ಟಿ ಗ್ರಾಮದಲ್ಲಿ ಇಂದು ಬೈಕ್ ರ್ಯಾಲಿ ಹಾಗೂ ರೋಡ್ ಶೋ ನಡೆಸಿದ ನಂತರ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಹಾನಗಲ್ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ನುಡಿದಂತೆ ನಡೆಯುವುದು ನಮ್ಮ ಧರ್ಮ. ಹಾನಗಲ್ ತಾಲ್ಲೂಕಿನ ನೀರಾವರಿ ಯೋಜನೆಗಳು, ಪ್ರತಿಯೊಂದು ಗ್ರಾಮಕ್ಕೂ ಶಾಲೆ, ಸಂಪರ್ಕ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಭೂಮಿ ಇಲ್ಲದವರಿಗೆ ಉದ್ಯೋಗ ನೀಡುವುದು. ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಜಾತಿ, ಮತ , ಪಂಥದ ಆಧಾರದ ಮೇಲೆ ನಾವು ಮತ ಕೇಳುವುದಿಲ್ಲ. ಬೇಧವಿಲ್ಲದೆ, ಬಡವರ ಪರ ಅಹರ್ನಿಶಿ ದುಡಿದ ಸಿ.ಎಂ. ಉದಾಸಿ ಅವರು ಹಾನಗಲ್ ತಾಲ್ಲೂಕಿನ ಅಭಿವೃದ್ಧಿಗಾಗಿ ಶ್ರಮಿಸಿದರು. ಕನಿಷ್ಟ 30 ಸಾವಿರ ಕುಟುಂಬಗಳಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಬೇಕು. ತಾಲ್ಲೂಕಿಗೆ ಉತ್ತಮ ರಸ್ತೆ ನಿರ್ಮಾಣ, ಬಸವ ವಸತಿ ಯೋಜನೆಯಡಿ 5000 ಮನೆ, ಅಮೃತ ಯೋಜನೆಯಲ್ಲಿ 2400 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು ಎಂದರು.