ಗುಬ್ಬಿ: ರಾಷ್ಟ್ರೀಯ ಪಕ್ಷಗಳ ಅಬ್ಬರ, ಮುಖಂಡರ ಪಕ್ಷಾಂತರ, ನಂಬಿದ ನಾಯಕರ ವಿಶ್ವಾಸ ದ್ರೋಹದ ನಡುವೆಯೂ ಪ್ರಾದೇಶಿಕ ಪಕ್ಷವನ್ನು ಕಳೆದ 12 ವರ್ಷಗಳಿಂದ ಕಟ್ಟುತ್ತಾ ಬಂದಿದ್ದೇನೆ ಎಂದು ಹೇಳುತ್ತಲೇ ಉಕ್ಕಿಬಂದ ದುಃಖವನ್ನು ತಡೆದುಕೊಂಡು ಬಿಕ್ಕಳಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾತಿನ ನಡುವೆಯೇ ತೀವ್ರ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣಿರಿಟ್ಟ ಭಾವುಕ ಘಟನೆ ಗುಬ್ಬಿಯಲ್ಲಿ ಇಂದು ನಡೆಯಿತು.
ಯುವ ಮುಖಂಡ ಬಿ.ಎಸ್.ನಾಗರಾಜು ಮತ್ತಿತತರ ಪಕ್ಷ ಸೇರ್ಪಡೆಯ ಕಾರ್ಯಕ್ರಮದಲ್ಲಿ ಮಾತನಾಡುವಾಗ; ಪಕ್ಷ ಕಟ್ಟುವ ಹಾಗೂ ಅನೇಕ ಸಂಕಷ್ಟಗಳ ಸಮಯದಲ್ಲಿ ಪಕ್ಷವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹೆಜ್ಜೆ ಹೆಜ್ಜೆಗೂ ನಡೆದ ವಿಶ್ವಾಸ ದ್ರೋಹಗಳು, ನಂಬಿದ ನಾಯಕರೇ ಬೆನ್ನಿಗೆ ಚೂರಿ ಹಾಕಿದ ಘಟನೆಗಳನ್ನು ನೆನೆದು ಅವರು ದುಃಖದಿಂದ ಬಿಕ್ಕಳಿಸಿದರು.
ದೇವೇಗೌಡರ ಕುಟುಂಬ ಹಣ ಇಟ್ಟುಕೊಂಡು ರಾಜಕೀಯ ಮಾಡಲಿಲ್ಲ. ನಿಮ್ಮಂಥ ಲಕ್ಷಾಂತರ ಕಾರ್ಯಕರ್ತರಿಂದ ರಾಜಕೀಯ ಮಾಡಿ ನಾಡಿನ ಸೇವೆ ಮಾಡಿದ್ದೇವೆ. ನಿಮ್ಮ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇವೆ. ನಮಗೆ ದೊಡ್ಡ ದೊಡ್ಡ ಶ್ರೀಮಂತರ ಸಂಪರ್ಕವೂ ಇಲ್ಲ. ನಮಗೆ ಇರುವುದು ನಿಮ್ಮಂಥ ಕಾರ್ಯಕರ್ತರ ಸಂಬಂಧ ಮಾತ್ರ, ಒಂದೊಂದು ಚುನಾವಣೆ ನಡೆಸಬೇಕಾದರೂ ಎಷ್ಟೆಷ್ಟು ಕಷ್ಟಪಟ್ಟಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತು. ನಾವೇನಿದ್ದರೂ ನಿಮ್ಮಿಂದ ಬೆಳೆದವರು ಎಂದು ಅವರು ಜನರನ್ನು ಉದ್ದೇಶಿಸಿ ಹೇಳಿದರು.
ಇಸ್ರೇಲ್ʼನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು:
ಎರಡನೇ ಸಲ ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ನಾನು ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ʼಗೆ ಭೇಟಿ ನೀಡಿದ್ದೆ. ಅಲ್ಲಿಯೇ ನನ್ನ ಪ್ರಾಣ ಹೋಗಬೇಕಾಗಿತ್ತು. ನನ್ನ ತಂದೆ-ತಾಯಿ ಮಾಡಿದ ಪುಣ್ಯದಿಂದ ನಾನು ಬದುಕುಳಿದು ವಾಪಸ್ ಬಂದೆ. ಎರಡನೇ ಸಲ ಹೃದಯದ ಆಪರೇಷನ್ ಆದಾಗ ಒಂದೇ ತಿಂಗಳಲ್ಲಿ ಪಕ್ಷ ಕಟ್ಟಬೇಕೆಂದು ರಾಜ್ಯಾದ್ಯಾಂತ ಪ್ರವಾಸಕ್ಕೆ ಹೊರಟುಬಿಟ್ಟೆ. ಯಾರು ಕೂಡ ನನ್ನ ಹಿಂದೆ ಬಂದು ರಾಜ್ಯಾದ್ಯಂತ ಸುತ್ತಲಿಲ್ಲ. ದೇವೇಗೌಡರು ಈ ವಯಸ್ಸಿನಲ್ಲೂ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮತ್ತೊಮ್ಮೆ ಕುಮಾರಸ್ವಾಮಿ ಅವರು ಉಕ್ಕಿಬಂದ ದುಃಖವನ್ನು ತಡೆದುಕೊಂಡರು.
ಇಷ್ಟೆಲ್ಲ ಕಷ್ಟಪಟ್ಟು ನಾವು ಪಕ್ಷದ ಕೆಲಸ ಮಾಡುತ್ತಿದ್ದರೂ ಇನ್ನೂ ನಮಗೆ ಸಿಗುತ್ತಿರುವುದು 40 ಸ್ಥಾನಗಳಷ್ಟೇ. ಇದರಲ್ಲಿ ಪಕ್ಷವನ್ನು ಏಣಿಯಂತೆ ಬಳಸಿಕೊಂಡು ಒದ್ದು ಹೋದವರ ಪ್ರಮೇಯವೂ ಇದೆ. ಪಕ್ಷಕ್ಕೆ ಬರುವ ತನಕ ಜನರ ಸೇವೆ ಎನ್ನುವವರು ನಂತರ ಹಣದ ಹಿಂದೆ ಬೀಳುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸತ್ಯ ನಿಮ್ಮ ಮುಂದೆ ಇಟ್ಟಿದ್ದೇನೆ:
ಎಲ್ಲ ಸತ್ಯಾಂಶಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ತೀರ್ಮಾನ ನಿಮ್ಮದು ಎನ್ನುತ್ತಲೇ ಗುಬ್ಬಿಯ ರಾಜಕೀಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಹೆಚ್‌ಡಿಕೆ ಅವರು; ವೀರಣ್ಣ ಗೌಡರು 1999ರಲ್ಲಿ ಪಕ್ಷದಿಂದ ಶಾಸಕರಾದರು. ಆಗ ಪಕ್ಷದಿಂದ ಗೆದಿದ್ದ ಹತ್ತು ಶಾಸಕರಲ್ಲಿ ಆರು ಜನ ಕಾಂಗ್ರೆಸ್ ಸೇರಿಬಿಟ್ಟರು. ಹಾಗೆಯೇ ವೀರಣ್ಣಗೌಡರೂ ಕಾಂಗ್ರೆಸ್ ಕಡೆ ಹೋದರು. 2004ರ ಚುನಾವಣೆಯಲ್ಲಿ ಚೆನ್ನಿಗಪ್ಪನವರು ದೇವೇಗೌಡರ ಮನೆಗೆ ಶಿವನಂಜಪ್ಪ ಅವರನ್ನು ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಮುಂದಿನ ಚುನಾವಣೆಗೆ ಅವರಿಗೇ ಟಿಕೆಟ್ ಅಂತ ಗೌಡರು ಮಾತೂ ಕೊಟ್ಟಿದ್ದರು.
ಆಗಿನ್ನೂ ನಾನು ರಾಜಕೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಜವಾಬ್ದಾರಿ ಸ್ಥಾನದಲ್ಲಿ ಇರಲಿಲ್ಲ. ಅದೇ ಸಮಯದಲ್ಲಿ ಇವತ್ತಿನ ಗುಬ್ಬಿ ಶಾಸಕರಾದ ಶ್ರೀನಿವಾಸ್ ನನ್ನ ಸಂಪರ್ಕಕ್ಕೆ ಬಂದರು. ಆಗ ಅವರು ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ನಾನು ದೇವೇಗೌಡರ ಅಭಿಮಾನಿ, ಅವರ ಹೋರಾಟಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದರು, ನಾನೂ ನಂಬಿದೆ.
2004ರಲ್ಲಿ ಗುಬ್ಬಿಯಿಂದ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದು ಅವರ ಇಚ್ಚೆಯಾಗಿತ್ತು. ಆದರೆ ಗೌಡರು ಶಿವನಂಜಪ್ಪ ಅವರಿಗೆ ಮಾತು ಕೊಟ್ಟಿದ್ದರು. ಆ ಮಾತನ್ನೂ ತಂದೆಯವರು ಶ್ರೀನಿವಾಸ್ ಅವರಿಗೇ ನೇರವಾಗಿ ಹೇಳಿದರು. ಈ ಸಲ ಶಿವನಂಜಪ್ಪ ಅವರಿಗೆ ಕೊಟ್ಟ ಮಾತು ತಪ್ಪಲಾರೆ, ಇನ್ನೊಮ್ಮೆ ಟಿಕೆಟ್ ಕೊಡುವೆ, ದಯವಿಟ್ಟು ಕ್ಷಮಿಸಪ್ಪ ಎಂದಿದ್ದರು.
ಆಗ ನನ್ನ ಮನೆಗೆ ಬಂದು ಮತ್ತೆ ಟಿಕೆಟ್ ಕೇಳಿದಾಗ ನಾನು ಗೌಡರು ಹೇಳಿದ್ದನ್ನೇ ಶ್ರೀನಿವಾಸ್ ಅವರಿಗೆ ಹೇಳಿದೆ. ಆಗ ಅವರಿಗೆ ನಾನೊಂದು ಮಾತು ಹೇಳಿದೆ. ನಿಮಗೆ ಜನರ ಒಲವು ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿ, ಜನರ ಆಶೀರ್ವಾದ ಇದ್ದರೆ ಗೆಲ್ಲುತ್ತೀರಿ ಎಂದೆ. ಈಗ ಅವರ ತಂದೆಯವರೂ ಇದ್ದಾರೆ, ಅವರು ಇದ್ದಾರೆ. ಇದನ್ನು ಬಿಟ್ಟರೆ ನನ್ನಿಂದ ಬೇರೆ ಯಾವ ಲೋಪವೂ ಅಗಿಲ್ಲ.
ಆಗ ನಮ್ಮ ಪಕ್ಷದಲ್ಲಿ ಎಂಪಿ ಪ್ರಕಾಶ್, ಪಿಜಿಆರ್ ಸಿಂಧ್ಯಾ, ಸಿದ್ದರಾಮಯ್ಯ ಸೇರಿ ಹಲವಾರು ನಾಯಕರು ಇದ್ದರು. ನಂತರ ಪಕ್ಷೇತರವಾಗಿ ಸ್ಪರ್ಧಿಸಿದ ಶ್ರೀನಿವಾಸ್ ಜನರ ಆಶೀರ್ವಾದದಿಂದ ಗೆದ್ದರು. ಆಗ ಸಮ್ಮಿಶ್ರ ಸರ್ಕಾರ ಇತ್ತು. ಶ್ರೀನಿವಾಸ್ ನಮ್ಮ ಜತೆ ಚೆನ್ನಾಗಿದ್ದರು. ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಆಗ ನಾನೂ ಅವರಂತೆ ಒಬ್ಬ ಶಾಸಕನಾಗಿದ್ದೆ. ಆದರೆ ನನ್ನ ಜತೆ ಉತ್ತಮ ಒಡನಾಟ ಇತ್ತು. ಅಣ್ಣತಮ್ಮಂದಿರಂತೆ ಇದ್ದೆವು. ಸಂಶಯವೇ ಇಲ್ಲ. ಬಿಜೆಪಿ ಜತೆ ಸರ್ಕಾರ ಮಾಡಬೇಕಾದಾಗ ನನ್ನ ಜತೆಗೇ ನಿಂತರು. ಆಗ ಅವರು ನನಗೆ ಕಾದು ಕೆಲಸ ಮಾಡಿಸಿಕೊಳ್ಳಬೇಕಾಗಿರಲಿಲ್ಲ. ಅವರ ಎಲ್ಲ ಕೆಲಸಗಳು ಸುಲಭವಾಗಿ ಆಗುತ್ತಿದ್ದವು.
2008ರಲ್ಲೂ ಶ್ರೀವಾಸ್ ಗೆದ್ದರು, ನಮ್ಮ ಜತೆ ಅದೇ ಸಂಬಂಧ ಹೊಂದಿದ್ದರು. ಆ ಗೆಳೆತನ ಹಾಗೆಯೇ ಇತ್ತು. 2013ರಲ್ಲಿ ನಮ್ಮ ಪಕ್ಷ 40 ಸ್ಥಾನ ಗೆದ್ದಾಗ ಪಕ್ಷಕ್ಕಾಗಿ ಆಗಿನ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದೆ. ನಾನು ಕೇವಲ ನಾಮಪತ್ರ ಹಾಕಿಬಂದಿದ್ದೆ, ಆದರೆ ಕೇವಲ 40 ಸಾವಿರ ಮತಗಳ ಅಂತರದಿಂದ ಸೋತೆ ಅಷ್ಟೇ. ನಾನು ಬೇರೆ ಕಡೆ ಪ್ರಚಾರಕ್ಕೆ ಹೋಗಿದ್ದರಿಂದ ಅಲ್ಲಿ ಪ್ರಚಾರ ಮಾಡಲಿಲ್ಲ. ಒಂದು ವೇಳೆ ಪ್ರಚಾರ ಮಾಡಿದ್ದಿದ್ದರೆ ಗೆಲ್ಲುತ್ತಿದ್ದೆ. 2013-14ರಲ್ಲಿ ಕೆಲವರು ಇದ್ದರಲ್ಲ, ಕಾಂಗ್ರೆಸ್ ರಾಜ್ಯಸಭೆ ಅಭ್ಯರ್ಥಿಗೆ ಮತ ಹಾಕಿದವರು, ಅವರ ಸಂಪರ್ಕಕ್ಕೆ ಹೋಗಿ ನನ್ನ ಬಗ್ಗೆ ಕೇವಲವಾಗಿ ಮಾತನಾಡತೊಡಗಿದರು. ಅಲ್ಲಿಂದ ನಮ್ಮ ಸಂಪರ್ಕ ಕಡಿಮೆಯಾಯಿತು. ಆದರೂ ನನ್ನಿಂದ ಯಾವುದೇ ಅಪಚಾರ ಆಗಿಲ್ಲ ಎಂದು ಕುಮಾರಸ್ವಾಮಿ ಅವರು ಶ್ರೀನಿವಾಸ್ ಅವರ ಇಡೀ ರಾಜಕೀಯ ಬದುಕನ್ನು ಬಿಡಿಸಿಟ್ಟರು.
ಶಿರಾದ ಸತ್ಯನಾರಾಯಣ ಅವರಂಥ ಹಿರಿಯ ನಾಯಕರನ್ನು ಕಡೆಗಣಿಸಿ ಈ ವ್ಯಕ್ತಿಯನ್ನು ಮಂತ್ರಿ ಮಾಡಿದ್ದು ನನ್ನ ತಪ್ಪಾ? ಸರ್ಕಾರ ರಚನೆ ಮಾಡಿದ ಮೇಲೆ ಕಾಂಗ್ರೆಸ್ ನಾಯಕರು ನನ್ನ ಪಕ್ಷದ ಶಾಸಕರ ಬ್ರೈನ್ ವಾಶ್ ಮಾಡಲು ಶುರು ಮಾಡಿದರು. ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ, ಅವನ ಆಯುಷ್ಯ ಇನ್ನೆಷ್ಟು ದಿನ ಇದೆಯೋ? ಮುಂದೆ ಆ ಪಕ್ಷವೇ ಇರುವುದಿಲ್ಲ ಅಂತ ಕೆಲವರು ಇಂಥ ವ್ಯಕ್ತಿಗಳಿಗೆ ತಲೆಗೆ ತುಂಬಿದರು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕಾಂಗ್ರೆಸ್ ನಿಂದ ವ್ಯವಸ್ಥಿತ ಅಪಪ್ರಚಾರ:
2018ರ ಚುನಾವಣೆಯಲ್ಲಿ ಯಾರಿಗೂ ಬಹುಮತ ಬರಲಿಲ್ಲ, ದೇವೇಗೌಡರ ಮನೆಗೆ ಬಂದ ಕಾಂಗ್ರೆಸ್ ನಾಯಕರು ಜೆಡಿಎಸ್ ಕಾಂಗ್ರೆಸ್ ಸರ್ಕಾರ ಮಾಡೋಣ ಅಂತ ಗೌಡರಿಗೆ ದುಂಬಾಲು ಬಿದ್ದರು. ಗೌಡರಂತು ಖರ್ಗೆ ಅವರನ್ನೇ ಸಿಎಂ ಮಾಡಿ ಅಂತ ಅವರಿಗೆ ಹೇಳಿದರು. ಆದರೆ, ದೆಹಲಿ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು ಎಂದು ಹೇಳಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು ಎಂದ ಕುಮಾರಸ್ವಾಮಿ ಅವರು, ಆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕಾಂಗ್ರೆಸ್ ನಡೆಸಿದ ಷಡ್ಯಂತ್ರವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಆ ಚುನಾವಣೆಯಲ್ಲಿ ನಮ್ಮ ಪಕ್ಷದ ವಿರುದ್ಧ ದುರುದ್ದೇಶಪೂರಿತವಾಗಿ ಪ್ರಚಾರ ಮಾಡಿದರು ಕಾಂಗ್ರೆಸ್ ನಾಯಕರು. ಗೆದ್ದರೆ ಬಿಜೆಪಿ ಜತೆ ಹೋಗಿ ಸರ್ಕಾರ ಮಾಡ್ತಾರೆ, ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎಂದೆಲ್ಲ ರಾಜ್ಯಾದ್ಯಂತ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿದರು. ಅಲ್ಪಸಂಖ್ಯಾತರ ಧರ್ಮ ಗುರುಗಳಿಗೆ ತಪ್ಪು ಮಾಹಿತಿ ನೀಡಿ, ನಿವೃತ್ತ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ಇಡೀ ರಾಜ್ಯಾದ್ಯಾಂತ ಕಳಿಸಿ ಮುಸ್ಲೀಮರಲ್ಲಿ ಜೆಡಿಎಸ್ ಬಗ್ಗೆ ತಪ್ಪು ಭಾವನೆ ಮೂಡಿಸಿದರು ಎಂದು ಅವರು ದೂರಿದರು.
ಅದರ ಪ್ರತಿಫಲವಾಗಿ ಬಿಜೆಪಿ 40 ರಿಂದ 105 ಕ್ಷೇತ್ರಗಳಲ್ಲಿ ಗೆದ್ದರೆ, 130 ಸ್ಥಾನ ಇದ್ದಂಥ ಕಾಂಗ್ರೆಸ್ ಪಕ್ಷದವರು ನಮ್ಮನ್ನು ಮುಗಿಸಲಿಕ್ಕೆ ಹೋಗಿ 78 ಸ್ಥಾನಕ್ಕೆ ಕುಸಿದರು. ಹಾಗಾದರೆ, ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಾರು? ಎಂದು ಅವರು ಪ್ರಶ್ನೆ ಮಾಡಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಗೌರಿಶಂಕರ್, ಸುರೇಶ ಬಾಬು, ವೀರಭದ್ರಪ್ಪ, ತುರುವೇಕೆರೆ ಕೃಷ್ಣಪ್ಪ ಮುಂತಾದವರು ಇದ್ದರು.