ಟಿ20 ವಿಶ್ವಕಪ್ ನ ಹೈವೋಲ್ಟೇಜ್ ಮ್ಯಾಚ್ ಎಂದೇ ಹೇಳಲಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಟಿವಿ ಮುಂದೆ ಕುಳಿತಿದ್ದಾರೆ. ಬಹುತೇಕ ಎಲ್ಲರ ಮನೆಗಳಲ್ಲಿ ಮನೆ ಮಂದಿಯೆಲ್ಲ ಪಂದ್ಯ ನೋಡುತ್ತಿದ್ದು, ಕೆಲವೆಡೆ ಗೆಳೆಯರೆಲ್ಲ ಒಂದೆಡೆ ಸೇರಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಇವತ್ತು ಭಾನುವಾರ ಬಿಡುವಿನ ದಿನವಾಗಿರುವುದರಿಂದ ಕೆಲವು ಹೋಟೆಲ್, ಬಾರ್, ಕ್ಲಬ್ ಗಳಲ್ಲಿ ಕ್ರಿಕೆಟ್ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಡೀ ದೇಶದಲ್ಲೇ ಭಾರತ –ಪಾಕ್ ತಂಡಗಳ ನಡುವಿನ ಪಂದ್ಯದ ಮೇನಿಯಾ ಶುರುವಾಗಿರುವುದರಿಂದ ಜನರೆಲ್ಲಾ ಟಿವಿ ಮುಂದೆ ಕುಳಿತಿದ್ದು, ಮೊದಲೇ ಭಾನುವಾರದ ರಜೆ ಜೊತೆಗೆ ಹೈವೋಲ್ಟೇಜ್ ಮ್ಯಾಚ್ ನೋಡುವಲ್ಲಿ ಜನ ನಿರತರಾಗಿರುವುದರಿಂದ ಬಹುತೇಕ ಎಲ್ಲೆಡೆ ಬಂದ್ ವಾತಾವರಣ ಕಂಡು ಬಂದಿದೆ.
ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಪ್ರಮುಖ ವಹಿವಾಟು ಕೇಂದ್ರಗಳು, ಮಾರುಕಟ್ಟೆಗಳಲ್ಲಿಯೂ ಜನ, ವಾಹನ ಸಂಚಾರ ವಿರಳವಾಗಿದೆ. ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿರುವುದು. ಟಿ20 ವಿಶ್ವಕಪ್ ಪಂದ್ಯವಾಗಿರುವುದರಿಂದ ವೀಕ್ಷಕರಲ್ಲಿ ಕುತೂಹಲ ಸಹಜವಾಗಿಯೇ ಹೆಚ್ಚಾಗಿದೆ. ಭಾರತ ತಂಡದ ಗೆಲುವಿಗೆ ಕೋಟ್ಯಂತರ ಅಭಿಮಾನಿಗಳು ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.
5 ವಿಶ್ವಕಪ್ ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಎಲ್ಲಾ ಪಂದ್ಯಗಳಲ್ಲಿ ಭಾರತ ತಂಡ ಜಯಗಳಿಸಿದೆ. ಒಟ್ಟು 8 ಸಲ ಭಾರತ-ಪಾಕ್ ತಂಡ ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 7 ಬಾರಿ ಮತ್ತು ಪಾಕಿಸ್ತಾನ 1 ಬಾರಿ ಜಯಗಳಿಸಿದೆ. ಇಂದಿನ ಪಂದ್ಯದ ಬಗ್ಗೆ ಕುತೂಹಲ ಭಾರಿ ಹೆಚ್ಚಿದೆ.