ಕೊರೊನಾ ಪ್ರಕರಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಅಕ್ಟೋಬರ್ 22 ರವರೆಗೆ ಒಂದು ನೂರು ಕೋಟಿಗೂ ಹೆಚ್ಚು ನಾಗರಿಕರಿಗೆ ಲಸಿಕೆ ಹಾಕಲಾಗಿದೆ. ಎಲ್ಲಾ ಆರ್ಥಿಕ ಚಟುವಟಿಕೆಗಳು ಮತ್ತೆ ದಾರಿಗೆ ಬರ್ತಿವೆ. ವರ್ಕ್ ಫ್ರಂ ಹೋಮ್ ಸಂಸ್ಕೃತಿ ನಿಧಾನವಾಗಿ ಕಡಿಮೆಯಾಗ್ತಿದೆ. ಟಿಸಿಎಸ್, ಇನ್ಫೋಸಿಸ್, ಹೆಚ್ ಸಿಎಲ್ ಟೆಕ್ನಾಲಜೀಸ್‌ನಂತಹ ಉನ್ನತ ಐಟಿ ಕಂಪನಿಗಳು, ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುವ ತಯಾರಿ ನಡೆಸುತ್ತಿವೆ.
ದೇಶದ ಅತಿದೊಡ್ಡ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಉದ್ಯೋಗಿಗಳಲ್ಲಿ ಶೇಕಡಾ 70 ರಷ್ಟು ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿರುವುದರಿಂದ ಅವರನ್ನು ಕಚೇರಿಗೆ ಕರೆಸಿಕೊಳ್ಳುವ ಸಿದ್ಧತೆ ನಡೆದಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕರ್ ಹೇಳಿದ್ದಾರೆ. ವರ್ಷಾಂತ್ಯದೊಳಗೆ ಮತ್ತೆ ಕಚೇರಿ ಶುರುಮಾಡಲು ಕಂಪನಿ ತಯಾರಿ ನಡೆಸಿದೆ. ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ಶೇಕಡಾ 90ರಷ್ಟು ಉದ್ಯೋಗಿಗಳನ್ನು ಕಚೇರಿಗೆ ಕರೆಸುವುದಾಗಿ ಟಿಸಿಎಸ್ ಈ ಹಿಂದೆ ತಿಳಿಸಿತ್ತು.
ದೇಶದ ಎರಡನೇ ಅತಿದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್ ಈಗ ಕೆಲಸ ಮಾಡಲು ಹೈಬ್ರಿಡ್ ಮಾದರಿಯನ್ನು ಆಶ್ರಯಿಸುವುದಾಗಿ ಹೇಳಿದೆ. ಕೊರೊನಾ ಸಮಯದಲ್ಲಿ ಜನಪ್ರಿಯವಾದ ಹೈಬ್ರಿಡ್ ಮಾದರಿಯಲ್ಲಿ, ಉದ್ಯೋಗಿಗಳಿಗೆ ತಮ್ಮ ಕೆಲಸದ ಸ್ಥಳ ಆಯ್ದುಕೊಳ್ಳುವ ಆಯ್ಕೆಯಿರುತ್ತದೆ.
ಇನ್ಫೋಸಿಸ್ ನಂತೆಯೇ, ಮಾರಿಕೊ ಮತ್ತು ವಿಪ್ರೊದಂತಹ ಕಂಪನಿಗಳು ಕೂಡ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ. ಇದು ಉದ್ಯೋಗಿಗಳ ಪ್ರಯಾಣದ ಸಮಯವನ್ನು ಉಳಿಸುವುದರ ಜೊತೆಗೆ ಬಾಡಿಗೆ ಮತ್ತು ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲಿದೆ.