ಜಾಗತಿಕ ಮೆಸೇಜಿಂಗ್ ವೇದಿಕೆಗಳನ್ನು ವಿದೇಶಿ ಹಾಗೂ ವಿದೇಶಿ ವಾಣಿಜ್ಯ ಸಂಸ್ಥೆ ಎಂದು ಕರೆಯುವ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ವಾಟ್ಸಾಪ್ ಹಾಗೂ ಅದರ ಮೂಲ ಸಂಸ್ಥೆ ಫೇಸ್ಬುಕ್ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ.
ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರವು, ವಿದೇಶಿ ವಾಣಿಜ್ಯ ಸಂಸ್ಥೆಯಾಗಿರುವ ಫೇಸ್ಬುಕ್ ಹಾಗೂ ವಾಟ್ಸಾಪ್ಗೆ ಭಾರತದ ಸಾಂವಿಧಾನಿಕ ಕಾನೂನುಗಳನ್ನು ಪ್ರಶ್ನೆ ಮಾಡುವ ಅಧಿಕಾರವಿಲ್ಲ ಎಂದು ಹೇಳಿತ್ತು. ಇದರ ಜೊತೆಯಲ್ಲಿ ಈ ಕಂಪನಿಯು ಭಾರತದಲ್ಲಿ ಯಾವುದೇ ವ್ಯಾಪಾರಿ ಸ್ಥಳವನ್ನು ಹೊಂದಿಲ್ಲ. ಕೇವಲ ವ್ಯವಹಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಸ್ಪಷ್ಟನೆ ನೀಡಿದೆ.
ಭಾರತೀಯ ಸಂವಿಧಾನದ ಅಡಿಯಲ್ಲಿ ಇರುವ ಕಾನೂನು ನಿಬಂಧನೆಗಳನ್ನು ಪ್ರಶ್ನಿಸಲು ವಿದೇಶಿ ವಾಣಿಜ್ಯ ಸಂಸ್ಥೆಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಈ ಹಕ್ಕುಗಳು ಕೇವಲ ದೇಶದ ನಾಗರಿಕರಿಗೆ ಮಾತ್ರ ಲಭ್ಯವಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಹೊಸ ಐಟಿ ನಿಯಮಾವಳಿಗಳನ್ನು ನ್ಯಾಯಾಲಯದ ಎದುರು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ ಇದು ಅಪರಾಧಗಳನ್ನು ತಡೆಯಲು ಕಾನೂನು ವ್ಯವಸ್ಥೆಗೆ ನೆರವಾಗಲಿದೆ ಎಂದು ಹೇಳಿದೆ. ಲೈಂಗಿಕ ಅಪರಾಧಗಳ ಬಗ್ಗೆ ಎಲೆಕ್ಟ್ರಾನಿಕ್ ಸಾಧನದ ಮೂಲಕ ಮಾಹಿತಿಯನ್ನು ಹಂಚುವ ಅಪರಾಧಿಗಳನ್ನು ಕಂಡುಹಿಡಿಯುವುದು ಕರ್ತವ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಾಟ್ಸಾಪ್ನ ಹೊಸ ನಿಯಮಾವಳಿಗಳ ವಿಚಾರವಾಗಿಯೂ ಅಫಿಡವಿಟ್ನಲ್ಲಿ ವಿವರಣೆ ನೀಡಿರುವ ಕೇಂದ್ರ ಸರ್ಕಾರ ವಾಟ್ಸಾಪ್ನ ಹೊಸ ನಿಯಮಾವಳಿಗಳು ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಫೇಸ್ಬುಕ್ಗೆ ನೀಡುತ್ತದೆ. ಈ ನಿಯಮವು ರಾಷ್ಟ್ರದ ಭದ್ರತೆ ಹಾಗೂ ಅದರ ಸಾರ್ವಭೌಮತ್ವಕ್ಕೆ ಹಾನಿ ಉಂಟು ಮಾಡಬಹುದು.ಅಲ್ಲದೇ ವೈಯಕ್ತಿಕ ಖಾಸಗಿತನದ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಹೇಳಿದೆ.