ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಪಡಿತರ ಚೀಟಿದಾರರು ಇನ್ನು ಮುಂದೆ ಪಡಿತರ ಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಂತು ಕಾಯಬೇಕಿಲ್ಲ. ಪಡಿತರ ಚೀಟಿದಾರರ ಮನೆ ಬಾಗಿಲಿಗೆ ರೇಷನ್ ಪೂರೈಕೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಆಂಧ್ರಪ್ರದೇಶದಲ್ಲಿ ಜಾರಿಯಲ್ಲಿರುವ ಮಾದರಿಯಲ್ಲಿ ರಾಜ್ಯದಲ್ಲಿಯೂ ಮನೆಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಯೋಜನೆ ಸಿದ್ದಪಡಿಸಲಾಗುತ್ತಿದೆ. ಇನ್ನುಮುಂದೆ ದೂರದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಪಡಿತರ ಹೊತ್ತುಕೊಂಡು ಬರುವ ಅಗತ್ಯವಿಲ್ಲ. ಶೀಘ್ರವೇ ಮನೆಯ ಬಾಗಿಲಿಗೆ ಲಗೇಜ್ ಆಟೋಗಳ ಮೂಲಕ ಪಡಿತರ ವಿತರಿಸಲಾಗುವುದು.
ಪಡಿತರಕ್ಕಾಗಿ ದಿನದ ಕೂಲಿ ಕೆಲಸ ಬಿಟ್ಟು ಗಂಟೆಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಲಗೇಜ್ ಆಟೋ ಗಳ ಮೂಲಕ ಮನೆಬಾಗಿಲಿಗೆ ಪಡಿತರ ಪೂರೈಸಲಿದ್ದು, ಅಕ್ರಮ ಕಾರ್ಡ್ ಗಳಿಗೆ ಕಡಿವಾಣ ಹಾಕಲಾಗುವುದು. ಪಡಿತರ ಚೀಟಿದಾರರ ದತ್ತಾಂಶವನ್ನು ಸಿದ್ಧಪಡಿಸಲಾಗುತ್ತಿದ್ದು, ಸಂಪೂರ್ಣ ಗಣಕೀಕರಣ ಮಾಡಿ ಫಲಾನುಭವಿಯನ್ನು ಆಧಾರ್ ಕಾರ್ಡ್ ಸಂಖ್ಯೆಗೆ ಜೋಡಣೆ ಮಾಡಲಾಗುವುದು ಎನ್ನಲಾಗಿದೆ.