ರಾಯಚೂರು: ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ರಾಜ್ಯದ 19 ಜಿಲ್ಲೆಗಳಲ್ಲಿ ಸಾಲ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಅ.26 ರ ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಾಲ ಸಂಪರ್ಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಸ್ವಾಮ್ಯದ ಎಲ್ಲ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಡಿಸಿಸಿಬಿಗಳು, ಎಂಎಫ್‌ಐಗಳು, ಎನ್‌ಬಿಎಫ್‌ಸಿಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು, ನಬಾರ್ಡ್ ಮತ್ತು ಕೆವಿಐಸಿ, ಕೆವಿಐಬಿ ಮತ್ತು ಡಿಐಸಿಯಂತಹ ಇತರ ಸರ್ಕಾರಿ ಇಲಾಖೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ.
ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಾಲದ ಅರ್ಜಿಗಳನ್ನು ಸ್ವೀಕರಿಸಲು, ಮಂಜೂರಾತಿ ಅಥವಾ ತಾತ್ವಿಕವಾಗಿ ಮಂಜೂರಾತಿ ಪತ್ರಗಳನ್ನು ವಿತರಿಸಲು ಸಾಲ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಪಿಎಂಎವೈ(ಮುದ್ರಾ), ಸ್ಟ್ಯಾಂಡ್ ಅಪ್ ಇಂಡಿಯಾ, ಪಿಎಂ ಸ್ವನಿಧಿ, ಇಸಿಎಲ್‌ಜಿಎಸ್, ಪಿಎಂಇಜಿಪಿ, ಕೃಷಿ ಮೂಲಸೌಕರ್ಯ ನಿಧಿ ಯೋಜನೆ(ಎಐಎಫ್), ಪಶು ಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆ, ಕೃಷಿ, ಎಂಎಸ್‌ಎಂಇ, ಚಿಲ್ಲರೆ, ಶಿಕ್ಷಣ, ವಸತಿ ಸಾಲಗಳು ಮತ್ತು ಆತ್ಮನಿರ್ಭರ ಭಾರತ ಕಾರ್ಯಕ್ರಮದಲ್ಲಿನ ಇತರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ಹೇಳಲಾಗಿದೆ.