ಬೆಂಗಳೂರು: ಮತದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನವೆಂಬರ್ 8 ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕೈಗೊಳ್ಳಲಾಗಿದೆ.
ಭಾರತ ಚುನಾವಣಾ ಆಯೋಗದಿಂದ ನವೆಂಬರ್ 8 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ನವೆಂಬರ್ 8 ರಿಂದ ಡಿಸೆಂಬರ್ 12 ವರೆಗೆ ಪಟ್ಟಿಗೆ ಸೇರ್ಪಡೆ ಆಕ್ಷೇಪಣೆ ಸ್ವೀಕರಿಸಲಾಗುವುದು. ಮತದಾರರ ಪಟ್ಟಿಗೆ ಅರ್ಹತೆಯನ್ನು ಮುಂದಿನ ವರ್ಷ ಜನವರಿ 1, 2022 ಕ್ಕೆ ಅನ್ವಯವಾಗುವಂತೆ ನವೆಂಬರ್ 8 ರಂದು ಪ್ರಕಟಿಸಲಾಗುವುದು.
ನವೆಂಬರ್ 7, 14, 21 ಹಾಗೂ 28 ರಂದು ವಿಶೇಷ ಅಭಿಯಾನ ನಡೆಯಲಿದೆ. ಡಿ. 27 ರಂದು ಹಕ್ಕು ಆಕ್ಷೇಪಣೆ ವಿಲೇವಾರಿ ಮಾಡಲಾಗುವುದು. ಜ. 13 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಮತದಾರರು ತಮ್ಮ ಹೆಸರು, ವಿಳಾಸ, ಸಂಬಂಧ ಮತ್ತು ಯಾವುದೇ ತಿದ್ದುಪಡಿಗಳು ಇದ್ದಲ್ಲಿ voter.helpline ಆಪ್ ಡೌನ್ಲೋಡ್ ಮಾಡಿಕೊಂಡು ಪರಿಶೀಲನೆ ಮಾಡಿಕೊಳ್ಳಬೇಕು. ಸೇರ್ಪಡೆ, ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದ್ದು, 18 ವರ್ಷ ತುಂಬಿದವರು ಆಪ್ ಮೂಲಕ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕೆಂದು ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.