ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿ ಹಾಗೂ ಡ್ರಗ್ ಪೆಡ್ಲರ್ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಕೊಪ್ಪಳದ ಕಾಂಗ್ರೆಸ್ ಮಹಿಳಾ ಘಟಕವು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.
ಕಾಂಗ್ರೆಸ್ ನಾಯಕನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ನಳೀನ್ ಕುಮಾರ್ ಕಟೀಲ್ ಗೆ ಬಾಯಿ ತೊಳೆದುಕೊಳ್ಳಿ ಎಂದು ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯರು ಫಿನಾಯಿಲ್ ಕಳುಹಿಸಿಕೊಟ್ಟಿದ್ದಾರೆ.
ಕೊಪ್ಪಳ ಅಂಚೆ ಕಚೇರಿ ಮೂಲಕ ಫಿನಾಯಿಲ್ ಬಾಟಲಿಯನ್ನು ನಳೀನ್ ಕುಮಾರ್ ಕಟೀಲ್ ಗೆ ಕಳುಹಿಸಲಾಗಿದೆ. ನಳೀನ್ ಕುಮಾರ್ ನಿಮ್ಮ ಹೊಸಲಿ ಬಾಯಿ ತೊಳೆದುಕೊಳ್ಳಿ ಎಂದು ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಕಾಂಗ್ರೆಸ್ ಮಹಿಳಾ ಘಟಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಹುಲ್ ಗಾಂಧಿ ಒಬ್ಬ ಮಾದಕ ದ್ರವ್ಯ ವ್ಯಸನಿ ಹಾಗೂ ಡ್ರಗ್ ಪೆಡ್ಲರ್ ಆಗಿದ್ದಾರೆ. ಹೀಗಿರುವಾಗ ಅವರು ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು.