ಧಾರವಾಡ: ಧಾರವಾಡ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಅಕ್ಟೋಬರ್ 24 ರಂದು ಮಧ್ಯಾಹ್ನ 12 ರಿಂದ 1.30 ಗಂಟೆಯ ವರೆಗೆ ಧಾರವಾಡ ನಗರದ ವಿವಿಧ 19 ಶಾಲಾ ಹಾಗೂ ಕಾಲೇಜುಗಳಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ.
ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ನಾಲ್ಕು (4) ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕೋವಿಡ್-19 ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಅಭ್ಯರ್ಥಿಗಳು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಹಾಗೂ ಕುಡಿಯುವ ನೀರನ್ನು ತಮ್ಮ ಸಂಗಡ ತೆಗೆದುಕೊಂಡು ಬರುವುದನ್ನು ಕಡ್ಡಾಯಗೊಳಿಸಲಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಕರೆ ಪತ್ರವನ್ನು ಪೊಲೀಸ್ ಇಲಾಖೆಯ ಅಂತರ್ಜಾಲ www.ksp.gov.in ದಲ್ಲಿ ಪಡೆದುಕೊಳ್ಳುವಂತೆ ಮತ್ತು ಕರೆಪತ್ರದಲ್ಲಿ ಸೂಚಿಸಿದ ಸೂಚನೆಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರ ಸ್ಥಳಾಂತರ:
ಧಾರವಾಡ ಜಿಲ್ಲಾ ಪೊಲೀಸ್ ಘಟಕದಿಂದ ಗುರುತಿಸಲ್ಪಟ್ಟಿದ್ದ ಭಾರತ ಹೈಸ್ಕೂಲ್, ಶಿವಾಜಿ ಸರ್ಕಲ್, ಧಾರವಾಡದ ಪರೀಕ್ಷಾ ಕೇಂದ್ರವನ್ನು ಕಾರಣಾಂತರಗಳಿಂದ ಕೆಪಿಇಎಸ್ಎಸ್ ಸಂಸ್ಥೆಯ ಡಾ.ಜಿ.ಎಂ. ಪಾಟೀಲ್ ಕಾನೂನು ಮಹಾವಿದ್ಯಾಲಯ, ತಹಶೀಲ್ದಾರ್ ಕಛೇರಿ ಹತ್ತಿರ, ಡಿ.ಸಿ.ಕಂಪೌಂಡ್, ಧಾರವಾಡ ಇಲ್ಲಿಗೆ ಬದಲಾವಣೆಗೊಳಿಸಲಾಗಿದೆ. ರೋಲ್ ನಂ.9566801 ರಿಂದ 9567200 ರ ವರೆಗಿನ ಅಭ್ಯರ್ಥಿಗಳು ಬದಲಾವಣೆಗೊಂಡ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕೆಂದು ಧಾರವಾಡ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.