ಆನ್ ಲೈನ್ ಬ್ಯಾಂಕಿಂಗ್ ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸುವುದು ನೀರು ಕುಡಿದಷ್ಟೇ ಸುಲಭ.
ಮೊದಲಾಗಿದ್ದರೆ, ಬ್ಯಾಂಕಿಗೆ ಹೋಗಿ ರಶೀದಿ ಬರೆದು ಕ್ಯೂ ನಿಲ್ಲಬೇಕಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ ಡಿಜಿಟಲ್ ವಾಲೆಟ್ಸ್, ನೆಫ್ಟ್/ಆರ್ಟಿಜಿಎಸ್, ಯುಪಿಐ, ಗೂಗಲ್ ಪೇ, ಭೀಮ್ ಒಂದೋ ಎರಡೋ..…. ಅಂಗೈನಲ್ಲೇ ಕ್ಷಣ ಮಾತ್ರದಲ್ಲಿ ಬ್ಯಾಂಕಿಂಗ್ ಕೆಲಸಗಳನ್ನು ಮಾಡಿ ಮುಗಿಸಬಹುದು.
ಕೆಲವೊಮ್ಮೆ ಡಿಜಿಟಲ್ ಟ್ರಾನ್ಸಾಕ್ಷನ್ ಗಳಲ್ಲೂ ಯಾವ್ಯಾವುದೋ ಕಾರಣಗಳಿಗೆ ಎಡವಟ್ಟುಗಳಾಗುವುದಿದೆ. ನಿಮ್ಮ ಕಣ್ತಪ್ಪಿ ಬೀಳಬೇಕಾದ ಖಾತೆಗೆ ಹಣ ಬೀಳದೆ ಇನ್ಯಾರದೋ ಖಾತೆಗೆ ಬೀಳುವುದಿದೆ. ಟೆನ್ಶನ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಅದಕ್ಕೆ ಪರಿಹಾರವಿದೆ. ನೀವು ಮಾಡಬೇಕಾದಿಷ್ಟು….
ಬ್ರಾಂಚ್ ಮ್ಯಾನೇಜರ್ ನನ್ನು ಭೇಟಿಯಾಗಿ : ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖೆಯ ಮ್ಯಾನೇಜರ್ ಗೆ ಆಗಿರುವ ಸಮಸ್ಯೆಯನ್ನು ಫೋನ್ ಮೂಲಕ, ಈ ಮೇಲ್ ಮೂಲಕ ತಿಳಿಯಪಡಿಸಿ. ಇಂತಹ ಸಂದರ್ಭದಲ್ಲಿ ದಿನಾಂಕ, ಸಮಯ, ಟ್ರಾನ್ಸಾಕ್ಷನ್ ನಂಬರ್, ನಿಮ್ಮ ಖಾತೆ ಸಂಖ್ಯೆ, ಹಣ ವರ್ಗಾವಣೆಯಾಗಿರುವ ಖಾತೆ ಸಂಖ್ಯೆ ಇತ್ಯಾದಿ ಉಲ್ಲೇಖಿಸಲು ಮರೆಯದಿರಿ. ಬಳಿಕ ಬ್ರಾಂಚ್ ಮ್ಯಾನೇಜರ್ ರನ್ನು ಖುದ್ದಾಗಿ ಭೇಟಿಯಾಗಿ.
ದೂರು ನೀಡಿ : ಬಳಿಕ ನಿಮ್ಮ ಹಣ ತಪ್ಪಿ ಯಾವ ಖಾತೆಗೆ ಟ್ರಾನ್ಸ್ ಫರ್ ಆಗಿರುತ್ತದೋ ಆ ಖಾತೆ ಇರುವ ಬ್ಯಾಂಕ್ ಶಾಖೆಗೆ ನಿಮ್ಮ ಹಣ ತಪ್ಪಿ ವರ್ಗಾವಣೆಯಾಗಿರುವ ಬಗ್ಗೆ ದೂರು ನೀಡಿ. ಯಾವ ಬ್ಯಾಂಕ್ ಗೂ ತನ್ನ ಗ್ರಾಹಕನ ಅನುಮತಿಯಿಲ್ಲದೆ, ಆತನ ಖಾತೆಯಿಂದ ಹಣ ವರ್ಗಾಯಿಸುವ ಅಧಿಕಾರವಿರುವುದಿಲ್ಲ. ಹೀಗಾಗಿ ಈ ದೂರು ಅವಶ್ಯಕ.
ಕೇಸು ದಾಖಲಿಸಿ : ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಖಾತೆಗೆ ಹಣ ವರ್ಗಾಯಿಸಲ್ಪಟ್ಟ ವ್ಯಕ್ತಿಯು ವಸ್ತುಸ್ಥಿತಿ ಅರಿತು ಸ್ಪಂದಿಸುತ್ತಾನೆ. ಒಂದು ವೇಳೆ ಆತ ಸ್ಪಂದಿಸಿಲ್ಲ ಎಂದಾದಲ್ಲಿ ನೀವು ಕಾನೂನಿನ ಮೊರೆ ಹೋಗಿ ಕೇಸು ದಾಖಲಿಸಬಹುದು. ಆದರೆ ಇದು ನಿಮ್ಮ ಕೊನೆಯ ಆಯ್ಕೆಯಾಗಿರಲಿ.