ಬೆಂಗಳೂರು: ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವಂತೆ ವಾಲ್ಮೀಕಿ ಸಮುದಾಯ ಸೇರಿ ವಿವಿಧ ಸಮುದಾಯಗಳು ಬೇಡಿಕೆಯಿಟ್ಟಿದ್ದು, ಮೀಸಲಾತಿ ನೀಡುವ ಸಂಬಂಧ ತಜ್ಞರ ಅಭಿಪ್ರಾಯ ಪಡೆದು ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಈಗಿನ ಪರಿಸ್ಥಿತಿಯಲ್ಲಿ ಶೇಕಡ 50 ರಷ್ಟು ಮೀಸಲಾತಿ ನೀಡಲು ಸಾಧ್ಯವಿದೆ. ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟರಿಗೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗುವುದು. ಎಲ್ಲಾ ಸಮುದಾಯಗಳ ಹಿತ ಕಾಪಾಡಲು ತೀರ್ಮಾನ ಕೈಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ತಜ್ಞರ ಅಭಿಪ್ರಾಯ ಪಡೆದು ಕಾನೂನು ಚೌಕಟ್ಟಿನಲ್ಲಿ ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದ್ದಾರೆ.