ಚೆನ್ನೈ: ತಮಿಳುನಾಡು ಪೊಲೀಸರ ಲಂಚದ ದರ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿವಿಧ ಅಕ್ರಮ ಪ್ರಕರಣಗಳಲ್ಲಿ ನೀಡಬೇಕಿರುವ ಲಂಚದ ದರ ಪಟ್ಟಿ ಹರಿದಾಡುತ್ತಿದ್ದು, ಇಂತಹ ಭ್ರಷ್ಟ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೇಲಂ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ. ಅಭಿನವ್ ಕ್ರಮಕೈಗೊಂಡಿದ್ದಾರೆ.
ಸೇಲಂ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಅಪರಾಧ ಪ್ರಕರಣಗಳನ್ನು ಲಂಚ ಪಡೆದು ಮುಚ್ಚಿ ಹಾಕಲಾಗುತ್ತಿದ್ದು, ಅಂತಹ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಭ್ರಷ್ಟರ ಮೇಲೆ ನಿಗಾ ವಹಿಸಬೇಕೆಂದು ಕೆಳ ಹಂತದ ಅಧಿಕಾರಿಗಳಿಗೆ ಸುತ್ತೋಲೆ ನೀಡಲಾಗಿದೆ.
ಲೈಸೆನ್ಸ್ ಇಲ್ಲದೆ ಮದ್ಯ ಮಾರಾಟ ನಡೆಸಲು 10 ರಿಂದ 60 ಸಾವಿರ ರೂಪಾಯಿ, ಅಕ್ರಮ ಲಾಟರಿ ಟಿಕೆಟ್ ಮಾರಾಟ ಪ್ರಕರಣಕ್ಕೆ 1 ಲಕ್ಷ ರೂ., ಅಕ್ರಮ ಮರಳು ಪ್ರಕರಣದಲ್ಲಿ 20,000 ರೂ. ಸಿವಿಲ್ ವ್ಯಾಜ್ಯ ಪ್ರಕರಣಕ್ಕೆ 10 ಸಾವಿರ ರೂ.ನಿಂದ 1 ಲಕ್ಷ ರೂ., ಗ್ಯಾಂಬ್ಲಿಂಗ್ 10 ಸಾವಿರ ರೂ. ಹೀಗೆ ವಿವಿಧ ಅಕ್ರಮಗಳಿಗೆ ಲಂಚ ಫಿಕ್ಸ್ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅಭಿನವ್ ಅವರು, ಭ್ರಷ್ಟರ ಲಂಚದ ದರ ಪಟ್ಟಿಯನ್ನು ಬಹಿರಂಗಪಡಿಸುವ ಜೊತೆಗೆ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಪೊಲೀಸರು ಲಂಚಕ್ಕೂ ದರ ಫಿಕ್ಸ್ ಮಾಡಿರುವ ದರ ಪಟ್ಟಿ ವಿರುದ್ಧ ಅಭಿಪ್ರಾಯ ವ್ಯಕ್ತವಾಗಿದೆ.