ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಪಂದ್ಯವನ್ನು ರದ್ದುಗೊಳಿಸಬೇಕು ಎಂಬ ಒತ್ತಾಯ ತೀವ್ರವಾಗಿ ಕೇಳಿ ಬಂದಿದೆ.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸುತ್ತೇವೆ. ಆದರೆ, ಪಾಕ್ ವಿರುದ್ಧದ ಪಂದ್ಯ ರದ್ದು ಮಾಡಲು ಸಾಧ್ಯವಿಲ್ಲ. ಐಸಿಸಿ ಟೂರ್ನಿಯಲ್ಲಿ ಆಡಲೇಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಭಾರತ – ಪಾಕ್ ನಡುವಿನ ಪಂದ್ಯವನ್ನು ರದ್ದುಗೊಳಿಸಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಕೇಂದ್ರ ಸಚಿವ ಗಿರಿರಾಜ ಸಿಂಗ್ ಅವರು, ಅಕ್ಟೋಬರ್ 24ರಂದು ಭಾರತ-ಪಾಕಿಸ್ತಾನಗಳ ನಡುವೆ ನಡೆಯುವ ಪಂದ್ಯವನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಅದೇರೀತಿ, ಆಮ್ ಆದ್ಮಿ ಪಕ್ಷ ಶಾಸಕಿ ಆತಿಷಿ ಕೂಡ ಪಂದ್ಯ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕಾಶ್ಮೀರದಲ್ಲಿ ಉಗ್ರರು ನಡೆಸುತ್ತಿರುವ ನಾಗರಿಕರ ಹತ್ಯೆಯನ್ನು ವಿರೋಧಿಸಿ ಪಾಕ್ ವಿರುದ್ಧದ ಪಂದ್ಯವನ್ನು ರದ್ದುಗೊಳಿಸಬೇಕೆಂದು ಅವರು ಒತ್ತಾಯಿಸಿದ್ದು, ಈ ವಿಷಯದಲ್ಲಿ ಪ್ರಧಾನಿಯವರು ಅಭಿಪ್ರಾಯ ತಿಳಿಸಬೇಕೆಂದು ಆಗ್ರಹಿಸಿದ್ದಾರೆ.
ಕೊಳಕು ಮನಸ್ಥಿತಿಯ ಪಾಕಿಸ್ತಾನದೊಂದಿಗೆ ಕ್ರಿಕೆಡ್ ಆಡುವ ಅವಶ್ಯಕತೆಯಾದರೂ ಏನಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ರಾಜ್ಯ ಸಚಿವ ಜನರಲ್(ನಿವೃತ್ತ) ವಿ.ಕೆ. ಸಿಂಗ್ ಪ್ರಶ್ನಿಸಿದ್ದಾರೆ.
ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವ ಅಗತ್ಯವಿಲ್ಲ. ಆ ದೇಶದೊಂದಿಗೆ ಯಾರೂ ಆಡಲು ಬಯಸುವುದಿಲ್ಲ. ಅಂತಹ ಕೊಳಕು ಮನಸ್ಥಿತಿಯ ದೇಶದೊಂದಿಗೆ ಆಡುವ ಅವಶ್ಯಕತೆಯಾದರೂ ಏನಿದೆ ಎಂದು ಹೇಳಿದ್ದಾರೆ.