ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ವಾಕ್ಪ್ರಹಾರ ನಡೆಸಿದ್ದು, ಇದೀಗ ಶಾಸಕ ಜಮೀರ್ ಅಹ್ಮದ್ ಕೂಡ ಕೆಂಡ ಕಾರಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲಿದ್ದಾಗಲೂ ಕುಮಾರಸ್ವಾಮಿ ವಿಷ ಕಾರುತ್ತಿದ್ದರು ಎಂದು ಆರೋಪಿಸಿದ್ದಾರೆ.
ಹೆಚ್.ಡಿ.ಕೆ. ವಿರುದ್ಧ ವಾಗ್ದಾಳಿ ನಡೆಸಿರುವ ಜಮೀರ್ ಅಹ್ಮದ್, ಜಾಫರ್ ಷರೀಫ್ ಮೊಮ್ಮಗನನ್ನು ರಾಜಕೀಯವಾಗಿ ಮುಗಿಸಿದ್ದೇ ಕುಮಾರಸ್ವಾಮಿ. ಭೈರತಿ ಸುರೇಶ್ ಅವರಿಗೆ ಮತ ಹಾಕಲು ಡೀಲ್ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ತಮ್ಮ ಸ್ವಂತ ಅಣ್ಣ ರೇವಣ್ಣನನ್ನೇ ಕುಮಾರಸ್ವಾಮಿ ಸಹಿಸಲ್ಲ. ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಕೊಡಲಿಲ್ಲ. ಬಿ.ಎಸ್.ವೈ.ಗೆ ಅಧಿಕಾರ ಬಿಟ್ಟುಕೊಟ್ಟರೆ ರೇವಣ್ಣ ಡಿಸಿಎಂ ಆಗ್ತಾರೆ ಎಂಬ ಕಾರಣಕ್ಕೆ ಬಿಜೆಪಿ ಅಧಿಕಾರ ಬಿಟ್ಟುಕೊಡಲಿಲ್ಲ. ದೇವೇಗೌಡರು ನಿಜವಾದ ಜಾತ್ಯಾತೀತ ನಾಯಕ. ಅವರ ಎತ್ತರದಲ್ಲಿ ಕುಮಾರಸ್ವಾಮಿ ಒಂದೇ ಒಂದು ಪರ್ಸೆಂಟ್ ಸಹ ಇಲ್ಲ ಎಂದು ಗುಡುಗಿದ್ದಾರೆ.
ಸಿದ್ದರಾಮಯ್ಯನವರಿಗೆ ನನ್ನನ್ನು ಅಥವಾ ಅಲ್ಪಸಂಖ್ಯಾತರನ್ನು ಮುಗಿಸಬೇಕು ಎಂಬುದಿದ್ದರೆ ನಾನು ಕಾಂಗ್ರೆಸ್ ಗೆ ಬಂದಾಗ ಆಹಾರ ಖಾತೆ ಕೊಡುತ್ತಿರಲಿಲ್ಲ. ನನ್ನನ್ನು ಬೆಳೆಯಲೂ ಬಿಡುತ್ತಿರಲಿಲ್ಲ. ಆದರೆ ನನಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಹಜ್ ಖಾತೆ ಕೊಟ್ಟರು. ಅವರು ನನ್ನ ಯೋಗ್ಯತೆ ಅಳೆದಿದ್ದ ರೀತಿ ಹಾಗಿತ್ತು. ಜಾಫರ್ ಷರೀಫ್ ಮೊಮ್ಮಗನಿಗೆ ಅನ್ಯಾಯವಾಗುತ್ತೆ ಎಂದೆನಿಸಿದಾಗ ಮುಸ್ಲಿಂರಿಗೆ ಅನ್ಯಾಯ ಮಾಡಬೇಡಿ ಎಂದು ಹೆಚ್.ಡಿ.ಕೆ. ಬಳಿ, ದೇವೇಗೌಡರ ಬಳಿ ಮನವಿ ಮಾಡಿದ್ದೆ. ಜೆಡಿಎಸ್ ರಾಷ್ಟ್ರೀಯ ಪಕ್ಷವಲ್ಲ ಯಾರನ್ನೂ ಕೇಳಿ ಅಭ್ಯರ್ಥಿಯನ್ನು ಘೋಷಿಸಬೇಕಿಲ್ಲ. ಪದ್ಮನಾಭ ನಗರದಲ್ಲಿಯೇ ಕುಳಿತು ಯಾರನ್ನು ಬೇಕಾದರೂ ಅಭ್ಯರ್ಥಿ ಎಂದು ಘೋಷಿಸಬಹುದು ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಕರ್ನಾಟಕದಲ್ಲಿರುವ ಪಕ್ಷ. ಅವರು ಹೈಕಮಾಂಡ್ ಅನುಮತಿಗೆ ದೆಹಲಿಗೆ ಹೋಗಬೇಕಿಲ್ಲ. ನಾವು ಯಾವತ್ತೂ ಅಲ್ಪಸಂಖ್ಯಾತರ, ಮುಸ್ಲಿಂ ರ ಪರ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹಾಗಾದರೆ ಮುಂಬರುವ ಚುನಾವಣೆಯಲ್ಲಿ ಮುಸ್ಲಿಂರನ್ನು ಜೆಡಿಎಸ್ ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.