ಸಿಂದಗಿ: ಉಪಚುನಾವಣಾ ಅಖಾಡ ರಂಗೇರಿದ್ದು, ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಸಿಂದಗಿ ಚುನಾವಣ ಪ್ರಚಾರದಲ್ಲಿ ಭಾಗಿಯಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬಂತು. ಬಿ.ಎಸ್. ಯಡಿಯೂರಪ್ಪನವರು ಕಾಂಗ್ರೆಸ್ ಶಾಸಕರನ್ನು, ಜೆಡಿಎಸ್ ಶಾಸಕರನ್ನು ಕರೆದುಕೊಂಡು ತಾನು ಸಿಎಂ ಆಗಿ ಪಟ್ಟಕ್ಕೇರಿದರು. ಶಾಸಕರನ್ನು ಖರೀದಿಸಿ ಬಿಜೆಪಿ ಅನೈತಿಕ ಸರ್ಕಾರವನ್ನು ರಚನೆ ಮಾಡಿತು. ಆದರೆ ಏನಾಯಿತು. ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪನವರನ್ನು ಬಲವಂತದಿಂದ ಕಿತ್ತು ಬಿಸಾಕಿದರು. ಕಣ್ಣೀರು ಹಾಕುತ್ತಲೇ ಯಡಿಯೂರಪ್ಪ ಅಧಿಕಾರ ಬಿಟ್ಟುಕೊಟ್ಟರು. ಅಮಿತ್ ಶಾಗೆ ಹೆದರಿದ್ದರೂ ತಾನಾಗಿಯೇ ಸಿಎಂ ಪಟ್ಟ ಬಿಟ್ಟು ಕೊಟ್ಟಿದ್ದಾಗಿ ಸಮರ್ಥಿಸಿಕೊಂಡರು. ಯಡಿಯೂರಪ್ಪ ಜಾಗಕ್ಕೆ ಬೊಮ್ಮಾಯಿ ತಂದು ಕೂರಿಸಿದ್ರು. ಈ ಪಾರ್ಟಿ ನಾನೇ ಗೆದ್ದು ಸಿಎಂ ಆದೆ ಅಂತಾ ಬೀಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬೊಮ್ಮಾಯಿ ಆರ್.ಎಸ್.ಎಸ್. ಗಿರಾಕಿ. ಆರ್.ಎಸ್.ಎಸ್. ಹೇಳಿದಂತೆ ಇವರು ಕೇಳುತ್ತಾರೆ. ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ಪೊಲೀಸರೇ ಕೇಸರಿ ಶಾಲು ಧರಿಸಿ ಹಬ್ಬ ಆಚರಿಸುತ್ತಿದ್ದಾರೆ. ಆಯುಧ ಪೂಜೆ ದಿನ ವಿಜಯಪುರದಲ್ಲಿ ಪೊಲೀಸರೆಲ್ಲ ಕೇಸರಿ ಶಾಲು ಹಾಕಿಕೊಂಡು ಆಯುಧ ಪೂಜೆ ನೆರವೇರಿಸಿದರು ಎಂದರೆ ಇವರು ಪೊಲೀಸ್ ಧಿರಿಸನ್ನೇ ಬದಲಿಸಲು ಹೊರಟಿದ್ದಾರೆ. ಬಿಜೆಪಿ ನಾಯಕರು ಇಡೀ ರಾಜ್ಯವನ್ನೇ ಕೇಸರಿಕರಣ ಮಾಡಲು ಹೊರಟಿದ್ದಾರೆ ಎಂದು ಗುಡುಗಿದರು.
ನಾನು ಸಿಎಂ ಆಗಿದ್ದಾಗ ಯಾರೂ ಕೂಡ ಹಸಿವಿನಿಂದ ಇರಬಾರದು ಎಂದು 7 ಕೆ.ಜಿ.ಅಕ್ಕಿ ಕೊಟ್ಟೆ. ಆದರೆ ಯಡಿಯೂರಪ್ಪ ಸರ್ಕಾರ ಬರುತ್ತಿದ್ದಂತೆ ಅದನ್ನು 5 ಕೆ.ಜಿಗೆ ಇಳಿಸಿತು. 7 ಕೆ.ಜಿ ಅಕ್ಕಿ ಕೊಟ್ಟರೆ ಯಡಿಯೂರಪ್ಪ ಅಪ್ಪನ ಮನೆ ಗಂಟೇನು ಹೋಗುತ್ತಿತ್ತು ? ಏನು ಇವರ ಮನೆಯಿಂದ ಅಕ್ಕಿ ಕೊಡುತ್ತಿದ್ದರೆ ? ಜನರ ತೆರಿಗೆ ಹಣದಿಂದ ತಾನೆ ಕೊಡುತ್ತಿದ್ದರು ? ಆದರೂ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಸಿದ್ದೇಕೆ ? ನಾನು ಕೊಟ್ಟ ಮಾತಿನಂತೆ 15 ಲಕ್ಷ ಮನೆಗಳನ್ನು ಹಂಚಿಕೆ ಮಾಡಿದ್ದೇನೆ. ಆದರೆ ನಾವು ಕೊಟ್ಟ ಮನೆಗಳನ್ನು ಬಿಜೆಪಿ ಸರ್ಕಾರ ಲಾಕ್ ಮಾಡಿತು. ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿದೆ. ಅಭಿವೃದ್ಧಿಯನ್ನೇ ಲಾಕ್ ಮಾಡಿದ್ದಾರೆ. ನನ್ನ ಸರ್ಕಾರದ ಅವಧಿಯಲ್ಲಿ ಏನು ಮಾಡಿದೆ ಎಂಬುದರ ಪಟ್ಟಿಕೊಡುತ್ತೇನೆ. ಬಿಜೆಪಿ ಸರ್ಕಾರಕ್ಕೆ ದಮ್ ಇದ್ದರೆ ಅಭಿವೃದ್ಧಿ ಯೋಜನೆಗಳ ಪಟ್ಟಿ ಕೊಡಲಿ ಎಂದು ಸವಾಲು ಹಾಕಿದರು.
ಪ್ರಧಾನಿ ಮೋದಿ ಅಚ್ಚೇದಿನ್ ಆಯೇಗಾ ಎಂದು ಭರವಸೆ ನೀಡಿದರು. ವರ್ಷಕ್ಕೆ 2 ಸಾವಿರ ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು. ಯುವಕರು ಉದ್ಯೋಗ ಕೇಳಿದರೆ ಪಕೋಡಾ ಮಾರಿ ಎಂದು ಮೋದಿ ಪಂಗನಾಮ ಹಾಕಿದರು. ಉದ್ಯೋಗವಿಲ್ಲದೇ ಯುವಜನತೆ ನಿರುದ್ಯೋಗಿಗಳಾಗಿ ಮೋದಿ ಮೋದಿ ಎಂದು ಮೋದಿ ನಾಮ ಹಾಡುತ್ತಿದ್ದಾರೆ. ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ದೇಶದಲ್ಲಿ ಡೀಸೆಲ್ ದರ 100 ರೂಪಾಯಿ, ಪೆಟ್ರೋಲ್ ದರ 110 ರೂಪಾಯಿ, ಗ್ಯಾಸ್ ದರ 980 ರೂಪಾಯಿ ಮಾಡಿದ್ದಾರೆ. ಇದೇನಾ ಪ್ರಧಾನಿ ಮೋದಿ ಸರ್ಕಾರದ ಅಚ್ಚೇ ದಿನ್ ? ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದಿಂದ ದೇಶ, ರಾಜ್ಯದಲ್ಲಿ ಅಭಿವೃದ್ಧಿಯೂ ಸಾಧ್ಯವಿಲ್ಲ, ಉದ್ಯೋಗ ಸೃಷ್ಟಿಯೂ ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.