ಉತ್ತರ ಕೊರಿಯಾದ ಸೈನಿಕರು ತಮ್ಮ ಅಧ್ಯಕ್ಷ ಕಿಂಗ್ ಜಾಂಗ್-ಉನ್ ಅವರನ್ನು ಮೆಚ್ಚಿಸಲು ಆಘಾತಕಾರಿ ಶಕ್ತಿ ಪ್ರದರ್ಶನ ತೋರಿದ್ದಾರೆ. ಸೈನಿಕರು ಈ ಪ್ರದರ್ಶನ ಮಾಡುತ್ತಿದ್ದರೆ, ಪರಮೋಚ್ಚ ನಾಯಕ ಕಿಮ್ ಜಾಂಗ್-ಉನ್ ದೂರದಿಂದಲೇ ನಗುತ್ತಾ ನೋಡುತ್ತಿದ್ದ.
ಸೈನಿಕರು ತಮ್ಮ ತಲೆಯಿಂದ ಕಾಂಕ್ರೀಟ್ ಬ್ಲಾಕ್ ಗಳು ಮತ್ತು ಮರದ ಹಲಗೆಗಳನ್ನು ಒಡೆದಿದ್ದಾರೆ. ಉದ್ದವಾದ ಕೋಲಿನಿಂದ ಹೊಡೆತಗಳನ್ನು ಸ್ವೀಕರಿಸಿ, ತಾವು ಶಕ್ತಿವಂತರೆಂದು ತೋರಿಸಿದ್ದಾರೆ. ಹಾಗೂ ಮುರಿದ ಗಾಜಿನ ಚೂರುಗಳ ಮೇಲೆ ಮಲಗಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು.
ಈ ಘಟನೆಯ ದೃಶ್ಯಾವಳಿಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಸೈನಿಕನೊಬ್ಬ ತನ್ನ ಎದೆಯ ಮೇಲೆ ದಪ್ಪ ಕಾಂಕ್ರೀಟ್ ಬ್ಲಾಕ್ ಅನ್ನು ಇಟ್ಟು ಮಲಗಿರುವುದನ್ನು ನೋಡಬಹುದು. ಕೆಲವು ಸೆಕೆಂಡುಗಳ ನಂತರ, ಮತ್ತೊಬ್ಬ ಸೈನಿಕ ಬಂದು ಸುತ್ತಿಗೆಯಿಂದ ಬ್ಲಾಕ್ ಅನ್ನು ಹೊಡೆದಿದ್ದಾನೆ. ಸೈನಿಕರ ಈ ವೀರಾವೇಶದ ಶಕ್ತಿ ಪ್ರದರ್ಶನವು ನೋಡುಗರನ್ನು ಭೀತಿಗೊಳಿಸಿದೆ.
ಕಿಮ್ ಜಾಂಗ್-ಉನ್ ತನ್ನ ಸಹೋದರಿ ಕಿಮ್ ಯೋ ಜಾಂಗ್ ಮತ್ತು ಉತ್ತರ ಕೊರಿಯಾದ ಹಿರಿಯ ಸೇನಾ ಅಧಿಕಾರಿಗಳ ಪಕ್ಕದಲ್ಲಿ ಕುಳಿತು ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಿದ್ದಾರೆ.
ಪ್ರದರ್ಶನದಲ್ಲಿ ಅನೇಕ ವಿಲಕ್ಷಣ ವ್ಯಾಯಾಮಗಳನ್ನು ಮಾಡಿದ್ದು, ಸೈನಿಕರು ಗಾಳಿಯಲ್ಲಿ ಹಾರಿ ತಮ್ಮ ಪಾದಗಳಿಂದ ಬ್ಲಾಕ್ಗಳನ್ನು ಮುರಿದಿದ್ದಾರೆ. ಒಬ್ಬ ಸೈನಿಕ ತನ್ನ ಮುಖದಿಂದ ಅದನ್ನು ಒಡೆಯಲು ನೇರವಾಗಿ ಬ್ಲಾಕ್ಗೆ ಓಡುತ್ತಿರುವುದು ಕಂಡುಬಂದಿದೆ.
ವರದಿಗಳ ಪ್ರಕಾರ, ಈ ತೀವ್ರ ಪ್ರದರ್ಶನವು ಉತ್ತರ ಕೊರಿಯಾದಲ್ಲಿ ರಕ್ಷಣಾ ಪ್ರದರ್ಶನ ಉದ್ಘಾಟನಾ ಸಮಾರಂಭದ ಭಾಗವಾಗಿತ್ತು. ಪ್ರದರ್ಶನವು ದೇಶದ ಇತ್ತೀಚಿನ ಶಸ್ತ್ರಾಸ್ತ್ರಗಳನ್ನು ಸಹ ಪ್ರದರ್ಶಿಸಿದೆ.