ಗೋವಾ: ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಹಿಂಜರಿಯುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಗೋವಾದ ಧರ್ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿ, ನಾವೇ ಮೊದಲಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು. ಗಡಿಯಲ್ಲಿ ಯಾವುದೇ ರೀತಿಯ ದಾಳಿಗಳನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ಪಾಕಿಸ್ತಾನ ಪ್ರಾಯೋಜಕತ್ವ ವಹಿಸದಿದ್ದಲ್ಲಿ ಮತ್ತು ತನ್ನ ಅಕ್ರಮಗಳನ್ನು ನಿಲ್ಲಿಸದಿದ್ದರೆ ಇನ್ನಷ್ಟು ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಅಮಿತ್ ಶಾ ಎಚ್ಚರಿಕೆ ನೀಡಿದರು. ನಾವು ದಾಳಿಗಳನ್ನು ಸಹಿಸುವುದಿಲ್ಲ ಎಂಬುದನ್ನು ಸರ್ಜಿಕಲ್ ಸ್ಟ್ರೈಕ್ ಸಾಬೀತುಪಡಿಸಿದೆ. ನೀವು ಉಲ್ಲಂಘಿಸಿದರೆ ಇನ್ನಷ್ಟು ದಾಳಿ ನಡೆಯುತ್ತವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಪ್ರಧಾನಿ ಮೋದಿ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಸರ್ಜಿಕಲ್ ಸ್ಟ್ರೈಕ್ ಒಂದು ಮಹತ್ವದ ಹೆಜ್ಜೆಯಾಗಿದೆ. ನಾವು ಭಾರತದ ಗಡಿಯ ತಂಟೆಗೆ ಯಾರೂ ಬರಬಾರದು ಎಂಬ ಸಂದೇಶ ಕಳುಹಿಸಿದ್ದೇವೆ. ಆಗ ಮಾತುಕತೆಗೆ ಸಮಯವಿತ್ತು, ಆದರೆ, ಈಗ ಪರಸ್ಪರ ವಿನಿಮಯ ಮಾಡಿಕೊಳ್ಳುವ ಸಮಯ ಎಂದು ಶಾ ಹೇಳಿದರು.
ಸೆಪ್ಟೆಂಬರ್ 2016 ರಲ್ಲಿ ಭಾರತದ ಉರಿ, ಪಠಾಣ್ಕೋಟ್ ಮತ್ತು ಗುರುದಾಸ್ಪುರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಇದು ಪಾಕಿಸ್ತಾನದಲ್ಲಿ ಹಲವಾರು ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿತು. ಉರಿ ದಾಳಿಯ 11 ದಿನಗಳ ನಂತರ 2016 ರ ಸೆಪ್ಟೆಂಬರ್ 29 ರಂದು ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು.