ದಕ್ಷಿಣ ತೈವಾನ್ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, 46 ಜನರು ಸಾವನ್ನಪ್ಪಿದ್ದಾರೆ. ಹತ್ತಾರು ಜನರು ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿಯಿಡೀ ವಸತಿ ಕಟ್ಟಡವನ್ನು ಬೆಂಕಿ ಆವರಿಸಿದೆ. 13 ಅಂತಸ್ತಿನ ಕಟ್ಟಡದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಕಾವೋಸಿಯುಂಗ್ ನಗರದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
55 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 14 ಜನರು ಜೀವದ ಯಾವುದೇ ಲಕ್ಷಣ ತೋರಿಸಲಿಲ್ಲ. ತೀವ್ರ ಸುಟ್ಟಗಾಯಗಳಾದ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮಧ್ಯಾಹ್ನದವರೆಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಹೇಳಿಕೆಯ ಪ್ರಕಾರ, ಬೆಂಕಿಯು ಅತ್ಯಂತ ಭೀಕರವಾಗಿದ್ದು, ಕಟ್ಟಡದ ಹಲವು ಮಹಡಿಗಳನ್ನು ನಾಶಪಡಿಸಿದೆ.
ಭಾರಿ ಬೆಂಕಿ ಜ್ವಾಲೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಬೆಂಕಿ ತಗುಲಲು ಕಾರಣವೇನೆಂಬುದು ಗೊತ್ತಾಗಿಲ್ಲ. ಕನಿಷ್ಠ 11 ಮೃತದೇಹಗಳನ್ನು ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ಮುಖ್ಯಸ್ಥ ಲಿ ಚಿಂಗ್-ಹ್ಸಿಯು ತಿಳಿಸಿದ್ದಾರೆ.
ಕಟ್ಟಡವು ಸುಮಾರು 40 ವರ್ಷಗಳಷ್ಟು ಹಳೆಯದಾಗಿದೆ. ಕೆಳ ಹಂತದಲ್ಲಿರುವ ಅಂಗಡಿಗಳು ಮತ್ತು ಮೇಲಿನ ಅಪಾರ್ಟ್ಮೆಂಟ್ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.