ಎಲ್ಲೋ ಒಂದು ಕಡೆ ಬಿಜೆಪಿ ನನಗೆ ದ್ರೋಹ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಮಸಾಲೆ ಜಯರಾಮ್ ಹೇಳಿದ್ದಾರೆ.
ತುರುವೇಕೆರೆ ಕ್ಷೇತ್ರದ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಬಿಜೆಪಿಗೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಎಲ್ಲೋ ಒಂದು ಕಡೆ ಬಿಜೆಪಿ ನನಗೆ ದ್ರೋಹ ಮಾಡುತ್ತಿದೆ. ನನ್ನ ತಾಳ್ಮೆಗೂ ಮಿತಿ ಇದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಒಳ್ಳೆಯ ನಿಗಮ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ನವೆಂಬರ್ ತಿಂಗಳ ಗಡುವು ಕೊಡುತ್ತಿದ್ದೇನೆ. ಕೊಟ್ಟರೆ ಕೊಡಲಿ ಇಲ್ಲದಿದ್ದರೆ ಏನು ಮಾಡಬೇಕೆಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಸಾಂಬಾರು ಅಭಿವೃದ್ಧಿ ನಿಗಮದಲ್ಲಿ 10 ರೂಪಾಯಿ ದುಡ್ಡಿಲ್ಲ. ನಾನೇ ಊಟ ತೆಗೆದುಕೊಂಡು ಹೋಗಿ ಕೊಟ್ಟು ಬರಬೇಕು. ನಮ್ಮನ್ನು ಕಡೆಗಣಿಸಿದರೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇರುವುದಿಲ್ಲ. ನನ್ನನ್ನು ಕಡೆಗಣಿಸಿದರೆ ರಾಜಕೀಯವನ್ನೇ ಕೊನೆ ಮಾಡುತ್ತೇನೆ. ನವೆಂಬರ್ ಅಂತ್ಯದವರೆಗೂ ಕಾದು ನೋಡುತ್ತೇನೆ. ಒಳ್ಳೆಯ ನಿಗಮ ಕೊಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದು, ಈ ಮೂಲಕ ರಾಜೀನಾಮೆ ಎಚ್ಚರಿಕೆ ಕೊಟ್ಟಿದ್ದಾರೆನ್ನಲಾಗಿದೆ.