ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಕೊರೋನಾ ಕಾರಣದಿಂದಾಗಿ ಶಾಲೆಗಳು ಮುಚ್ಚಿದ ಕಾರಣ ಮನೆಯಲ್ಲಿಯೇ ಮಕ್ಕಳು ಉಳಿದುಕೊಂಡಿದ್ದಾರೆ. ಅವರು ಭೌತಿಕ ತರಗತಿಗಳಿಗೆ ಹೊಂದಿಕೊಳ್ಳುವಂತೆ ಮಾಡಲು ಸೇತುಬಂಧ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
ಮನೆಯಲ್ಲಿರುವ ಕಾರಣ ಮಕ್ಕಳು ಪಾಠ, ಅಕ್ಷರಾಭ್ಯಾಸದಿಂದ ಹಿಂದುಳಿದಿದ್ದಾರೆ. ಸೆಪ್ಟೆಂಬರ್ 23 ರಿಂದ ಶಾಲೆಗಳು ಆರಂಭವಾಗಿವೆ. ಭೌತಿಕ ತರಗತಿಗಳಿಗೆ ಹೊಂದಿಕೊಳ್ಳಲು ಮಕ್ಕಳಿಗೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಾಲೆಗಳು ವಿಳಂಬವಾಗಿ ಆರಂಭವಾಗಿರುವುದರಿಂದ ದಸರಾ ರಜೆ ಕಡಿತಗೊಳಿಸಲಾಗಿದೆ. ಇತರೆ ರಜೆ ದಿನಗಳಲ್ಲಿ ಶಾಲೆಗಳನ್ನು ನಡೆಸುವಂತೆ ತಿಳಿಸಲಾಗಿದ್ದು, ಇದರಿಂದ ಪಠ್ಯ ಪೂರ್ಣಗೊಳಿಸಬಹುದು. ಅಗತ್ಯವೆನಿಸಿದರೆ ಡಿಸೆಂಬರ್ ನಂತರ ಪಠ್ಯ ಕಡಿತದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.