ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸೋಮವಾರ ರಾತ್ರಿ ಮದರಸಾ ಶಿಕ್ಷಕ ಸೇರಿದಂತೆ ನಾಲ್ವರು 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ವರದಿಗಳ ಪ್ರಕಾರ, ಆರೋಪಿಗಳಲ್ಲಿ ಒಬ್ಬ ಆಕೆಗೆ ಉದ್ಯೋಗ ನೀಡುವ ನೆಪದಲ್ಲಿ ತನ್ನ ಮನೆಗೆ ಕರೆಸಿಕೊಂಡು ಇಂತಹ ಕೃತ್ಯವೆಸಗಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಸಯೀದ್ ಯಾಕೂಬ್ ಅಲಿ ಖಾನ್(51), ಮೊಹಮ್ಮದ್ ಅಬ್ರಾರ್ ಖಾನ್ (31), ಮೊಹಮ್ಮದ್ ರೆಹಮಾನ್ (40), ಮದರಸಾ ಶಿಕ್ಷಕ ಶಾರಿಕ್ ಖಾನ್ (29) ಎಂದು ಗುರುತಿಸಲಾಗಿದೆ. ಈ ನಾಲ್ವರು ಭೋಪಾಲ್ ನ ಆರಿಫ್ ನಗರ ಪ್ರದೇಶದ ನಿವಾಸಿಗಳಾಗಿದ್ದಾರೆ.
ಯುವತಿ ಅತ್ಯಂತ ಬಡ ಕುಟುಂಬಕ್ಕೆ ಸೇರಿದವಳಾಗಿದ್ದು ಆಕೆಯ ಪೋಷಕರು ದೈಹಿಕ ನ್ಯೂನತೆ ಹೊಂದಿದ್ದಾರೆ. ಯುವತಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದು, ಬೇರೆ ಕೆಲಸ ಹುಡುಕುತ್ತಿದ್ದಾಳೆ. ಸುಮಾರು 15 ದಿನಗಳ ಹಿಂದೆ, ಆಕೆಯ ಚಿಕ್ಕಪ್ಪ ಯಾಕೂಬ್ ಖಾನ್ ಅವರ ಸಂಪರ್ಕ ಸಂಖ್ಯೆಯನ್ನು ನೀಡಿದ್ದು, ಆಕೆಗೆ ಕೆಲಸ ಪಡೆಯಲು ಸಹಾಯ ಮಾಡುತ್ತಾನೆ ಎಂದು ಹೇಳಿದ್ದರು ಎಂದು ಪೊಲೀಸ್ ಅಧಿಕಾರಿ ವಿಜಯ್ ಖಾತ್ರಿ ಹೇಳಿದ್ದಾರೆ.
ಸೋಮವಾರ, ಯುವತಿ ಉದ್ಯೋಗಕ್ಕಾಗಿ ಯಾಕೂಬ್ ಖಾನ್ ನನ್ನು ಸಂಪರ್ಕ ಮಾಡಿದ್ದಾಳೆ. ಭೋಪಾಲ್ ನಗರದ ಇಸ್ಲಾಂ ನಗರದಲ್ಲಿರುವ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವ ಯಾಕೂಬ್ ಖಾನ್ ತನ್ನ ಆನ್ಲೈನ್ KIOSK ನಲ್ಲಿ ಕೆಲಸ ಕೊಡಿಸುವುದಾಗಿ ಕರೆಸಿಕೊಂಡಿದ್ದಾನೆ.
ಯುವತಿ ಯಾಕೂಬ್ ಖಾನ್ ಮನೆಗೆ ಹೋದಾಗ ಯಾಕೂಬ್ ಅವಳನ್ನು ತನ್ನ ಮನೆಯೊಳಗೆ ಬಂಧಿಸಿಟ್ಟಿದ್ದು ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾಣೆ. ನಂತರ, ಆಕೆಯ ಮೇಲೆ ಇತರ ಮೂವರು ಆರೋಪಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಎಸ್‌ಪಿ ಹೇಳಿದ್ದಾರೆ.
ಕೃತ್ಯದ ನಂತರ, ಆರೋಪಿ ಮಹಿಳೆಗೆ ಹಣ ನೀಡುವ ಮೂಲಕ ಈ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾನೆ.
ಮಂಗಳವಾರ ಬೆಳಿಗ್ಗೆ ಯುವತಿ ಐಂತಖೇಡಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ನಂತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 376 ಡಿ(ಸಾಮೂಹಿಕ ಅತ್ಯಾಚಾರ) ಮತ್ತು 506(ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ದಾಖಲಿಸಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.