ವಿಪಕ್ಷ ನಾಯಕ ಸಿದ್ದರಾಮಯ್ಯರ ಸ್ಥಾನವನ್ನು ಪುಟಗೋಸಿ ಎಂದು ಕರೆದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಸಿಎಂ ಆಗಿದ್ದವರು. ಅವರ ತಂದೆ ಹೆಚ್.ಡಿ. ದೇವೇಗೌಡ ಸಿಎಂ ಜೊತೆಯಲ್ಲಿ ದೇಶದ ಪ್ರಧಾನಿ ಕೂಡ ಆಗಿದ್ದಾರೆ. ಇಂತಹ ಸ್ಥಾನದಲ್ಲಿದ್ದು ವಿರೋಧ ಪಕ್ಷ ನಾಯಕನ ಸ್ಥಾನವನ್ನು ಪುಟಗೋಸಿ ಎಂದಿದ್ದು ನಿಜಕ್ಕೂ ಶೋಭೆ ತರುವ ಸಂಗತಿಯಲ್ಲ. ಸದನದಲ್ಲಿ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಅದರದ್ದೇ ಆದ ಗೌರವವಿದೆ. ಹೀಗಾಗಿ ಈ ರೀತಿಯ ಮಾತುಗಳನ್ನಾಡಿದ ಹೆಚ್.ಡಿ.ಕೆ. ವಿರುದ್ಧ ಸಭಾಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರು.
ಸಮ್ಮಿಶ್ರ ಸರ್ಕಾರ ಕೆಡವಿದ್ದೇ ಸಿದ್ದರಾಮಯ್ಯ ಎಂಬ ಹೆಚ್.ಡಿ.ಕೆ. ಹೇಳಿಕೆಗೂ ಇದೇ ವೇಳೆ ಪ್ರತಿಕ್ರಿಯಿಸಿದ ಉಗ್ರಪ್ಪ, ಈ ಹಿಂದೆ ಸಮ್ಮಿಶ್ರ ಸರ್ಕಾರ ಅಲುಗಾಡುತ್ತಿದ್ದ ವೇಳೆ ನಾನೇ ಎಲ್ಲವನ್ನು ನೋಡಿಕೊಳ್ತೇನೆ ಡೋಂಟ್ ವರಿ ಎಂದವರೂ ನೀವೇ. ಮೈತ್ರಿ ಸರ್ಕಾರ ಕೆಡವಲು ಬಿಜೆಪಿ ರಣತಂತ್ರ ರೂಪಿಸಿದೆ ಎಂದು ಈ ಹಿಂದೆ ಸದನದಲ್ಲಿ ನೀವೇ ಹೇಳಿದ್ದೀರಿ. ಆದರೆ ಈಗ ಇದ್ದಕ್ಕಿದ್ದಂತೆ ಇನ್ನೊಬ್ಬರ ಹೆಸರಿಗೆ ಕೆಸರನ್ನು ಎರಚೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ರು.
ಯಡಿಯೂರಪ್ಪರನ್ನು ಕಪಿಮುಷ್ಠಿಯಲ್ಲಿಡಲು ಹೋಗಿ ಸಿದ್ದರಾಮಯ್ಯ ಐಟಿ ದಾಳಿ ನಡೆಯುವಂತೆ ಮಾಡಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದ್ದ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಉಗ್ರಪ್ಪ, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಬೇರೆ ಪಕ್ಷದ ನಾಯಕರನ್ನು ಎಲ್ಲರೂ ಭೇಟಿಯಾಗುತ್ತಾರೆ. ಯಾಕೆ ಯಡಿಯೂರಪ್ಪ ಸಿಎಂ ಆಗಿದ್ದಾಗ ತಾವು ಅವರನ್ನು ಭೇಟಿ ಮಾಡಿರಲೇ ಇಲ್ಲವೇ ಎಂದು ಕೇಳಿದ್ರು.