ಬೆಂಗಳೂರು ನಗರ ಉಸ್ತುವಾರಿ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿಯೇ ಭಿನ್ನಮತ ಮೂಡಿದೆ. ಸದ್ಯ ಈ ಖಾತೆಯಲ್ಲಿ ತಮ್ಮ ಬಳಿಯೇ ಇಟ್ಟುಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಯಾರ ಹೆಗಲಿಗೆ ಈ ಜವಾಬ್ದಾರಿ ನೀಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇನ್ನು ಈ ವಿಚಾರವಾಗಿ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರು ಉಸ್ತುವಾರಿ ಯಾರು ಎಂಬುದರ ಬಗ್ಗೆ ಕಾದು ನೋಡಿ ಎಂದು ಮಾರ್ಮಿಕ ಹೇಳಿಕೆಯನ್ನು ನೀಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ್, ಉಸ್ತುವಾರಿ ಆಯ್ಕೆ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು. ಅವರು ಕಾಲ ಕಾಲಕ್ಕೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಉಸ್ತುವಾರಿ ಆಯ್ಕೆ ವಿಚಾರದಲ್ಲಿಯೂ ಸಿಎಂ ಸರಿಯಾದ ನಿರ್ಣಯವನ್ನೇ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಇತ್ತ ಮುನಿರತ್ನ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, ಬೆಂಗಳೂರು ಉಸ್ತುವಾರಿ ಖಾತೆ ಸಿಎಂ ಬಳಿಯೇ ಇದೆ. ಅವರು ಅದನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಬೆಂಗಳೂರು ಉಸ್ತುವಾರಿ ಯಾರಿಗೆ ಎಂಬ ಚರ್ಚೆಯೇ ಅನಗತ್ಯವಾಗಿದೆ. ನಾವು ಬಿಜೆಪಿ ನಾಯಕರೆಲ್ಲ ಒಗ್ಗಟ್ಟಾಗಿಯೇ ಇದ್ದೇವೆ. ರಾಜ್ಯದ ಅಭಿವೃದ್ಧಿಗಾಗಿ ನಾವೆಲ್ಲ ಶ್ರಮಿಸುತ್ತೇವೆ ಎಂದು ಹೇಳಿದ್ರು.