ಕೊರೊನಾ ಸಾಂಕ್ರಾಮಿಕದ ಬಳಿಕ ಬಂದ್ ಆಗಿದ್ದ ತರಗತಿಗಳು ಹಂತ ಹಂತವಾಗಿ ಆರಂಭವಾಗುತ್ತಿದೆ. ಅದರಂತೆ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಯಾವಾಗ ಪುನಾರಂಭಗೊಳ್ಳಲಿದೆ ಎಂಬ ವಿಚಾರವಾಗಿಯೂ ಸಾಕಷ್ಟು ವಿಚಾರಗಳು ಕೇಳಿ ಬರ್ತಿವೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ. ಬಿ.ಸಿ. ನಾಗೇಶ್ ಎಲ್ಲಾ ಅಂದುಕೊಂಡಂತೆ ಆದರೆ ದಸರಾ ಬಳಿಕ 1 ರಿಂದ 5ನೇ ತರಗತಿ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.
1 ರಿಂದ 5ನೇ ತರಗತಿ ಆರಂಭಿಸುವ ಮುನ್ನ ನಾವು ಕೋವಿಡ್ ಮೂರನೇ ಅಲೆಯನ್ನೂ ಗಮನದಲ್ಲಿ ಇಟ್ಟು ಕೊಳ್ಳಬೇಕಿದೆ. ಹೀಗಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದರೆ ಮಾತ್ರ 1 ರಿಂದ 5ನೇ ತರಗತಿ ಆರಂಭ ಮಾಡುತ್ತೇವೆ. ಒಂದು ವೇಳೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಇದಕ್ಕೆ ಒಪ್ಪಿಗೆ ನೀಡದೇ ಇದ್ದಲ್ಲಿ 3 ರಿಂದ 5ನೇ ತರಗತಿ ಆರಂಭಕ್ಕೆ ಅನುಮತಿ ಕೇಳುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ದಸರಾ ಬಳಿಕ 1 ರಿಂದ 5ನೇ ತರಗತಿಗಳು ಆರಂಭವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಾತಿಗೆ ಪೂರಕ ಎಂಬಂತೆ ರಾಜ್ಯ ನಾಯಕರೂ ಹೇಳಿಕೆ ನೀಡ್ತಿದ್ದಾರೆ. ಹೀಗಾಗಿ ಇದೀಗ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ನಿರ್ಧಾರ ಏನು ಎಂಬುದರ ಮೇಲೆ ಪೋಷಕರು ಕಣ್ಣಿಟ್ಟಿದ್ದಾರೆ.