ನವದೆಹಲಿ: ಐಟಿ ಇಲಾಖೆ ತಮಿಳುನಾಡಿನ ಎರಡು ಉದ್ಯಮ ಸಂಸ್ಥೆಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 250 ಕೋಟಿ ರೂಪಾಯಿ ಕಪ್ಪುಹಣ ಪತ್ತೆಯಾಗಿದೆ.
ಇತ್ತೀಚೆಗೆ ನಡೆಸಲಾದ ದಾಳಿಯಲ್ಲಿ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗಿರುವುದಾಗಿ ಆದಾಯ ತೆರಿಗೆ ಇಲಾಖೆ ಭಾನುವಾರ ಮಾಹಿತಿ ನೀಡಿದೆ.
ಚಿಟ್ ಫಂಡ್ ವ್ಯವಹಾರ, ರೇಷ್ಮೆ ಸೀರೆ ವ್ಯಾಪಾರ ಮೊದಲಾದ ಉದ್ಯಮ ವಹಿವಾಟು ನಡೆಸುತ್ತಿರುವ ಸಂಸ್ಥೆಗಳಿಗೆ ಸೇರಿದ 34 ಸ್ಥಳಗಳಲ್ಲಿ ಅಕ್ಟೋಬರ್ 5 ರಂದು ದಾಳಿಮಾಡಿ ಪರಿಶೀಲನೆ ನಡೆಸಲಾಗಿದ್ದು, 400 ಕೋಟಿಗೂ ಅಧಿಕ ಅಕ್ರಮ ವ್ಯವಹಾರ ನಡೆದಿರುವುದು ಗೊತ್ತಾಗಿದೆ.
ಕಾಂಚೀಪುರಂ, ವೆಲ್ಲೂರು ಮತ್ತು ಚೆನ್ನೈನಲ್ಲಿ 34 ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ಲೆಕ್ಕವಿಲ್ಲದ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಲೆಕ್ಕಪತ್ರವಿಲ್ಲದೆ ವಹಿವಾಟು ನಡೆಸಿರುವುದು ಗೊತ್ತಾಗಿದೆ. ಹಲವಾರು ಪ್ರಾಮಿಸರಿ ನೋಟುಗಳು, ಸಹಿ ಮಾಡಿದ ನಂತರದ ದಿನಾಂಕದ ಚೆಕ್ಗಳು ಮತ್ತು ಕೊಟ್ಟಿರುವ ಸಾಲಗಳಿಗೆ ಅಥವಾ ಚಿಟ್ ಚಂದಾದಾರರಿಂದ ಮೇಲಾಧಾರವಾಗಿ ಇರಿಸಲಾಗಿರುವ ಪವರ್ ಆಫ್ ಅಟಾರ್ನಿ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಲೆಕ್ಕವಿಲ್ಲದ ಬಡ್ಡಿ ಆದಾಯವನ್ನು ಗಳಿಸಿದೆ. ಲೆಕ್ಕವಿಲ್ಲದ ದೊಡ್ಡ ಹೂಡಿಕೆಗಳು ಮತ್ತು ವೆಚ್ಚಗಳನ್ನು ಹೊಂದಿರುವುದು ಗೊತ್ತಾಗಿದೆ ಎಂದು ಸಿಬಿಡಿಟಿ ಹೇಳಿದೆ. 44 ಲಕ್ಷ ಮೌಲ್ಯದ ಲೆಕ್ಕವಿಲ್ಲದ ನಗದು ಮತ್ತು 9.5 ಕೆಜಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಹಿರಂಗಪಡಿಸದ ಆದಾಯದ 100 ಕೋಟಿ ರೂ. ಪತ್ತೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.