ಬೆಂಗಳೂರು: ರಾಜ್ಯದಲ್ಲಿ ಉಚಿತ ಅಂಗಾಂಗ ಕಸಿ ಯೋಜನೆ ಜಾರಿಯಲ್ಲಿದ್ದು, ಬಡ ಜನರಿಗೂ ಅಂಗಾಂಗ ಕಸಿ ಮಾಡಿಸುವ ಅನುಕೂಲ ಮಾಡಿಕೊಟ್ಟಿರುವ ಕರ್ನಾಟಕ ಸರ್ಕಾರ ಎಲ್ಲಾ ರಾಜ್ಯಗಳಿಗಿಂತಲೂ ಮುಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಶ್ಲಾಘಿಸಿದ್ದಾರೆ.
ಬೆಂಗಳೂರಿನಲ್ಲಿ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟ್ರಾಲಜಿ ಸೈನ್ಸಸ್ ಮತ್ತು ಆರ್ಗನ್ ಟ್ರಾನ್ಸ್ ಪ್ಲಾಂಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬಡ ಜನರಿಗೆ ಅಂಗಾಂಗ ಕಸಿ ಮಾಡಿಸಿಕೊಳ್ಳುವುದು ಕಷ್ಟ. ಈ ನಿಟ್ಟಿನಲ್ಲಿ ಕಡು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸೆಂಟ್ರಲ್ ವಿಸ್ತಾದ ಹೊಸ ಕಟ್ಟಡವೇ ’ನೈಜ ಸಂಸತ್’ ಆಗಲಿದೆ ಎಂದ ವಿನ್ಯಾಸಕಾರ
ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್, ನಮ್ಮ ದೇಶದಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಕಡಿಮೆಯಿದೆ. ಭಾರತದಲ್ಲಿ ಶೇ.0.36ರಷ್ಟು ಜನ ಮಾತ್ರ ಅಂಗಾಂಗ ದಾನ ಮಾಡುತ್ತಾರೆ. ಅಮೆರಿಕಾ ಅಂಗಾಂಗ ದಾನ ಮಾಡುವುದರಲ್ಲಿ ವಿಶ್ವಕ್ಕೆ ಮೊದಲ ಸ್ಥಾನದಲ್ಲಿದೆ. ಅಂಗಾಂಗ ದಾನದ ಬಗ್ಗೆ ರಾಜ್ಯದಲ್ಲಿ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಉಚಿತ ಅಂಗಾಂಗ ಕಸಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಲಿವರ್ ಸೇರಿದಂತೆ ಯಾವುದೇ ಅಂಗಾಂಗ ಕಸಿ ಮಾಡಿದರೂ ಎಸ್ ಸಿ, ಎಸ್ ಟಿ, ಓಬಿಸಿ ವರ್ಗಕ್ಕೆ ಉಚಿತವಾಗಿ ಅಂಗಾಂಗ ಕಸಿ ಮಾಡಲಾಗುವುದು ಎಂದು ಹೇಳಿದರು.