ಹೈದರಾಬಾದ್: ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಹೈದರಾಬಾದ್ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನಗರದಲ್ಲಿ ರಾತ್ರಿ 8:30 ರಿಂದ 11 ಗಂಟೆಯ ನಡುವೆ 10-12 ಸೆಂ.ಮೀ. ಮಳೆಯಾಗಿದ್ದು, ಪರಿಣಾಮವಾಗಿ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿವೆ.
ಪ್ರಬಲ ಪ್ರವಾಹಕ್ಕೆ ಸಿಲುಕಿದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡವು ಅವರಿಗಾಗಿ ಶೋಧ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಓಲ್ಡ್ ಸಿಟಿಯಲ್ಲಿ ಪ್ರವಾಹಕ್ಕೆ ಸಿಲುಕಿದ ರೆಸ್ಟೋರೆಂಟ್‌ನ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿದ್ದು, ಪ್ರವಾಹದ ನಡುವೆಯೂ ಜನರು ಕುಳಿತು ಆಹಾರ ಸೇವಿಸುತ್ತಿರುವುದು ಕಂಡುಬಂದಿದೆ.
ಹಾಗೆಯೇ ಪಿಕ್ ಅಪ್ ವಾಹನವೊಂದು ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಈ ವಿಡಿಯೋವನ್ನು ಕೂಡ ಎಎನ್ಐ ಪೋಸ್ಟ್ ಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಪ್ರವಾಹದ ಭೀಕರತೆಯನ್ನು ಇಲ್ಲಿನ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ನೆನಪಿಸಿಕೊಂಡಿದ್ದಾರೆ. ಅಲ್ಲದೆ ನಗರ ಆಡಳಿತವು ಮೂಲಸೌಕರ್ಯಗಳನ್ನು ಸುಧಾರಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.