ಬೆಂಗಳೂರು: ಬೆಂಗಳೂರು ನಗರ ಉಸ್ತುವಾರಿ ವಿಚಾರವಾಗಿ ಸಚಿವ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ನಡುವೆ ಪೈಪೋಟಿ ತೀವ್ರಗೊಂಡಿದ್ದು, ಸಚಿವ ಆರ್.ಅಶೋಕ್ ವಿರುದ್ಧ ಗರಂ ಆಗಿರುವ ವಿ.ಸೋಮಣ್ಣ, ವ್ಯಂಗ್ಯಭರಿತ ಮಾತಿನಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸೋಮಣ್ಣ, ಬೆಂಗಳೂರು ಉಸ್ತುವಾರಿಯನ್ನು ನೀಡುವಾಗ ಮುಖ್ಯಮಂತ್ರಿಗಳು ಜೇಷ್ಠತೆಯನ್ನು ಪರಿಗಣಿಸಬೇಕು. ಉಸ್ತುವಾರಿ ಸಿಎಂ ಬಳಿಯೇ ಇದ್ದರೆ ನಮ್ಮ ಅಭ್ಯಂತರವಿಲ್ಲ, ಆದರೆ ಬೇರೆಯವರಿಗೆ ಕೊಟ್ಟರೆ ನನ್ನನ್ನು ಪರಿಗಣಿಸಬೇಕು ನಾನು ಬೆಂಗಳೂರಿಗೆ ಹಿರಿಯ ಸಚಿವ ಎಂಬುದನ್ನು ಹೇಳಿದ್ದೇನೆ ಎಂದರು.
ಬೆಂಗಳೂರಿನ ಉಸ್ತುವಾರಿ ಮಾಡಲು ಯಾರ ಅನುಭವ ಏನು ಎಂಬುದನ್ನು ನೋಡಬೇಕು. ನಾನು 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ನಾನು ಮೊದಲು ಸಚಿವನಾಗಿದ್ದಾಗ ಆರ್.ಅಶೋಕ್ ಶಾಸಕನಾಗಿರಲಿಲ್ಲ. ಶಾಸಕರಾದ ಮೇಲೆ ಸಚಿವರಾಗಿ ನಾನು ಕರೆದ ಸಭೆಗೂ ಬಂದಿರಲಿಲ್ಲ. ನನ್ನ ಇಲಾಖೆ ಮನೆಗಳನ್ನು ಕೊಡುವಾಗ ನಾನು ಬೇರೆಯವರನ್ನು ಕೇಳಬೇಕಿಲ್ಲ ಅಶೋಕ್ ಅಂತ ಅವರಿಗೆ ಅವರ ಅಪ್ಪ-ಅಮ್ಮ ಯಾಕೆ ಹೆಸರಿಟ್ಟರು ಗೊತ್ತಿಲ್ಲ, ಆರ್.ಅಶೋಕ್ ಸಾಮ್ರಾಟ್ ತರಹ ಆಡುತ್ತಿದ್ದಾರೆ. ಸಾಮ್ರಾಟ್ ಚಕ್ರವರ್ತಿ ಕೆಲಸವೇ ಬೇರೆ, ನನ್ನ ಕೆಲಸವೇ ಬೇರೆ ಎಂದು ಗುಡುಗಿದ್ದಾರೆ.
ನನಗೆ ಯಾವ ದುರಹಂಕಾರವೂ ಇಲ್ಲ, ಅಶೋಕ್ ಕರೆದ ಸಭೆಗೂ ನಾನು ಹೋಗುತ್ತೇನೆ. ಆದರೆ ಅವರು ನಾನು ಕರೆದ ಸಭೆಗೆ ಬರಲ್ಲ. ನನಗೆ ಜನಸಾಮಾನ್ಯರ ಜೊತೆ ಹೆಚ್ಚು ಒಡನಾಟವಿದೆ. ನನ್ನ ಹಿರಿತನವನ್ನು ಪರುಗಣಿಸಿ ಉಸ್ತುವಾರಿ ಜವಾಬ್ದಾರಿ ಕೊಟ್ಟರೆ ಉತ್ತಮವಾಗಿ ನಿಭಾಯಿಸುತ್ತೇನೆ. ಬೇಕಿದ್ದರೆ ಬೆಂಗಳೂರು ಉಸ್ತುವಾರಿ ವಿಭಾಗವಾಗಲಿ, ನನಗೆ ಅರ್ಧ, ಅಶೋಕ್ ಗೆ ಅರ್ಧ ಕೊಡಲಿ. ನೋಡೋಣ ಎರಡು ಮೂರು ದಿನಗಳಲ್ಲಿ ಉಸ್ತುವಾರಿ ಬಗ್ಗೆ ನಿರ್ಧಾರ ಹೊರಬೀಳಲಿದೆ ಎಂದು ಹೇಳಿದರು.