ಶಿವಮೊಗ್ಗ: ಬಡವರಿಗೆ ಅನುಕೂಲವಾಗಲೆಂದು ನೀಡಲಾದ ಬಿಪಿಎಲ್ ಕಾರ್ಡ್ ಗಳನ್ನು ಉಳ್ಳವರು ಕೂಡ ಪಡೆದುಕೊಂಡಿದ್ದಾರೆ. ಹೀಗೆ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡ ಬಿಪಿಎಲ್ ಕಾರ್ಡ್ ಗಳನ್ನು ಹಿಂತಿರುಗಿಸುವಂತೆ ಆಹಾರ ಇಲಾಖೆಯಿಂದ ಅನೇಕ ಬಾರಿ ಸೂಚನೆ ನೀಡಲಾಗಿದೆ. ಇದರೊಂದಿಗೆ ಪರಿಶೀಲನೆ ನಡೆಸಿ ದಂಡ ವಿಧಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 2019 -20 ರಲ್ಲಿ 3729 ಅನರ್ಹ ರೇಷನ್ ಕಾರ್ಡ್ ಗಳನ್ನು ಪತ್ತೆ ಮಾಡಲಾಗಿದೆ. ಹೀಗೆ ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದುಕೊಂಡಿದ್ದವರಿಗೆ 20,36,249 ರೂಪಾಯಿ ದಂಡ ವಿಧಿಸಲಾಗಿದೆ.
2020 -21 ರಲ್ಲಿ 3508 ಕಾರ್ಡ್ ಗಳನ್ನು ಪತ್ತೆಮಾಡಿ 25,92,568 ರೂಪಾಯಿ ದಂಡ ವಿಧಿಸಲಾಗಿದೆ.
ಈ ವರ್ಷದ ಆಗಸ್ಟ್ ಕೊನೆವರೆಗೆ 5230 ಕಾರ್ಡ್ ಗಳನ್ನು ಪತ್ತೆ ಮಾಡಿ ಅನರ್ಹಗೊಳಿಸಿದ್ದು, 1,91,085 ರೂಪಾಯಿ ದಂಡ ವಿಧಿಸಲಾಗಿದೆ.
ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು, ಶ್ರೀಮಂತರು ಕೂಡ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಂತಹ ಕಾರ್ಡ್ ಗಳನ್ನು ಪತ್ತೆ ಮಾಡುವ ಕಾರ್ಯ ಮುಂದುವರೆದಿದೆ ಎಂದು ಹೇಳಲಾಗಿದೆ.