ತಿರುವನಂತಪುರಂ: ಕೇರಳದಲ್ಲಿ ಪೆಟ್ರೋಲ್ ಪಂಪ್ ಅಟೆಂಡೆಂಟ್ ಒಬ್ಬರ ಮಗಳು ಆರ್ಯ ರಾಜಗೋಪಾಲ್ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದಿದ್ದಾರೆ. ನೆಟ್ಟಿಗರು ಈಕೆಯನ್ನು ನಮಗೆಲ್ಲರಿಗೂ ಸ್ಪೂರ್ತಿ ಎಂದು ಕರೆದಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಯ ಮಾಜಿ ವಿದ್ಯಾರ್ಥಿನಿ ಆರ್ಯ, ಈಗ ಪೆಟ್ರೋಲಿಯಂ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಕೋರ್ಸ್‌ಗಾಗಿ ಕಾನ್ಪುರ ಐಐಟಿಗೆ ಪ್ರವೇಶ ಪಡೆದಿದ್ದಾರೆ. ಕಳೆದ 20 ವರ್ಷಗಳಿಂದ, ಆಕೆಯ ತಂದೆ ಪಂಪ್‌ನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಅವರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಐಐಟಿ ಕಾನ್ಪುರ ಪ್ರವೇಶಿಸಿದ್ದಕ್ಕಾಗಿ ಅವರನ್ನು ಪ್ರಶಂಸಿಸಿದ್ದಾರೆ.
ತಂದೆ ಮತ್ತು ಮಗಳ ಚಿತ್ರವನ್ನು ಹಂಚಿಕೊಂಡಿರುವ ವೈದ್ಯ, “ಇಂಡಿಯನ್ ಆಯಿಲ್ ನ ಅಟೆಂಡೆಂಟ್ ಶ್ರೀ ರಾಜಗೋಪಾಲನ್ ಅವರ ಮಗಳಾದ ಆರ್ಯ ಅವರ ಸ್ಫೂರ್ತಿದಾಯಕ ಕಥೆಯನ್ನು ನಾನು ಹಂಚಿಕೊಳ್ಳುತ್ತಿದ್ದೇನೆ. ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆಯುವ ಮೂಲಕ ಆರ್ಯ ನಮಗೆ ಹೆಮ್ಮೆ ತಂದಿದ್ದಾರೆ” ಎಂದು ಟ್ವಿಟ್ಟರ್ ನಲ್ಲಿ ಶೀರ್ಷಿಕೆ ನೀಡಿದ್ದಾರೆ.
ಈ ಪೋಸ್ಟ್ ವೈರಲ್ ಆಗಿದ್ದು, 12,000 ಕ್ಕೂ ಹೆಚ್ಚು ಲೈಕ್ಸ್ ಮತ್ತು 1400 ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಆರ್ಯ ಅವರ ಕಠಿಣ ಪರಿಶ್ರಮಕ್ಕಾಗಿ ಜನರು ಹೊಗಳಿದ್ದಾರೆ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದ್ದಾರೆ. ಅನೇಕರು ಆಕೆಯನ್ನು ದೇಶದ ಯುವ ಜನತೆಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಇನ್ನು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ಆರ್ಯ ಅವರನ್ನು ಶ್ಲಾಘಿಸಿ, ಟ್ವೀಟ್ ಮಾಡಿದ್ದಾರೆ.