ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸರ್ಕಾರದಿಂದ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಕಾಯ್ದೆಯ ಮೂಲಕ ಶಿಕ್ಷಕರ ವರ್ಗಾವಣೆ ಆದೇಶವನ್ನು ಸರ್ಕಾರ ಹೊರತಂದಿದೆ.
ಶಿಕ್ಷಕರ ವರ್ಗಾವಣೆಗಾಗಿ ಹೊಸದಾಗಿ ಕಾಯ್ದೆ ರೂಪಿಸಲು ಮುಂದಾಗಿದ್ದ ಶಿಕ್ಷಣ ಇಲಾಖೆ, ಕರ್ನಾಟಕ ಸಿವಿಲ್ ಸೇವೆಗಳ -ಶಿಕ್ಷಕರ ವರ್ಗಾವಣೆ ನಿಯಂತ್ರಣ ಅಧಿನಿಯಮವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ಸರ್ಕಾರದ ಒಪ್ಪಿಗೆಯೊಂದಿಗೆ ಆದೇಶ ಹೊರಡಿಸಲಾಗಿತ್ತು.
ಆಧ್ಯಾದೇಶದ ಅವಧಿ ಆರು ತಿಂಗಳು ಆಗಿದ್ದು, ಅಧಿನಿಯಮದ ಮೂಲಕ ಕಾಯ್ದೆ ರೂಪಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಸಚಿವಾಲಯದಿಂದ ಅಕ್ಟೋಬರ್ 5 ರಂದು ರಾಜ್ಯಪತ್ರದಲ್ಲಿ ಅಧಿನಿಯಮ ಪ್ರಕಟಿಸಲಾಗಿದೆ. ಈ ಆದೇಶ ಏಪ್ರಿಲ್ ನಿಂದಲೇ ಜಾರಿಗೆ ಬಂದಿರುವುದಾಗಿ ಹೇಳಲಾಗಿದೆ.
2019 -20 ನೇ ಸಾಲಿನಲ್ಲಿ ತಾಲೂಕಿನ ಹೊರಗೆ ವರ್ಗಾವಣೆಯಾದ ಪ್ರಾಥಮಿಕ ಶಾಲಾ ಶಿಕ್ಷಕರು, ಜಿಲ್ಲೆಯ ಹೊರಗೆ ವರ್ಗಾವಣೆ ಪಡೆದಿದ್ದ ಪ್ರೌಢಶಾಲಾ ಶಿಕ್ಷಕರಿಗೆ ಹಿಂದಿನ ಸ್ಥಳದಲ್ಲಿಯೇ ವರ್ಗಾವಣೆ ಪಡೆಯಲು ಅವಕಾಶ ನೀಡಲಾಗಿದೆ. ಕಡ್ಡಾಯ ವರ್ಗಾವಣೆ ಮತ್ತು ವಲಯ ವರ್ಗಾವಣೆ ಸಂದರ್ಭದಲ್ಲಿ 2019 -20 ರಲ್ಲಿ ವರ್ಗಾವಣೆಯಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಹಿಂದಿನ ಸ್ಥಳಕ್ಕೆ ವರ್ಗಾವಣೆಗೆ ಅವಕಾಶವಿರುತ್ತದೆ ಎಂದು ಹೇಳಲಾಗಿದೆ.