ಮುಂಬೈ: ಲಖಿಂಪುರ್ ಖೇರಿ ಹಿಂಸಾಚಾರದ ವಿರುದ್ಧ ಪ್ರತಿಭಟನೆಯ ನಿಮಿತ್ತ ಅಕ್ಟೋಬರ್ 11 ರಂದು ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ‘ಮಹಾ ವಿಕಾಸ ಅಘಾಡಿ’ (ಎಂವಿಎ) ರಾಜ್ಯಾದ್ಯಂತ ಬಂದ್ ಘೋಷಿಸಿದೆ.
ಲಖಿಂಪುರ್ ಖೇರಿ ಹಿಂಸಾಚಾರದ ವಿರುದ್ಧ ಅಕ್ಟೋಬರ್ 11 ರಂದು ಮಹಾ ವಿಕಾಸ ಅಘಾಡಿ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದೆ ಎಂದು ಸಚಿವ ಮತ್ತು ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಹೇಳಿದರು.
ಘಟನೆಯಲ್ಲಿ ರೈತರ ಸಾವಿಗೆ ವಿಷಾದ ವ್ಯಕ್ತಪಡಿಸುವ ನಿರ್ಣಯವನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ. ಮೃತರ ಗೌರವ ಸೂಚಕವಾಗಿ ಮೌನಾಚರಣೆ ನಡೆಸಲಾಗಿದ್ದು, ರೈತರ ಸಾವು ದುರದೃಷ್ಟಕರ ಎಂದು ಹೇಳಲಾಗಿದೆ.
ಜಯಂತ್ ಪಾಟೀಲ್ ಅವರು, ಮೃತ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯವನ್ನು ಮಂಡಿಸಿದರು. ಇದನ್ನು ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್(ಕಾಂಗ್ರೆಸ್) ಮತ್ತು ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ(ಶಿವಸೇನೆ) ಬೆಂಬಲಿಸಿದರು.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಒಡೆತನದ ವಾಹನವು ಪ್ರತಿಭಟನಾಕಾರರನ್ನು ಉರುಳಿಸಿದ ನಂತರ 4 ರೈತರು ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. ಸಚಿವರ ಪುತ್ರ ಆಶಿಶ್ ಮಿಶ್ರಾ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೊಲೆ ಆರೋಪವನ್ನು ಒಳಗೊಂಡಂತೆ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಆಡಳಿತಾರೂಢ ಪಕ್ಷಗಳೇ ಬಂದ್ ಗೆ ಕರೆ ನೀಡಿರುವುದರಿಂದ ಮಹಾರಾಷ್ಟ್ ಅಕ್ಟೋಬರ್ 11 ರಂದು ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ.