ವಿಜಯಪುರ: ಕಳೆದ ಕೆಲ ದಿನಗಳಿಂದ ವಿಜಯಪುರ ಜಿಲ್ಲೆಯ ಹಲವೆಡೆಗಳಲ್ಲಿ ಭೂಕಂಪನದ ಅನುಭವವಾಗುತ್ತಿದ್ದು, ಇಂದು ಮುಂಜಾನೆ ಕೂಡ ಮತ್ತೆ ಭೂಕಂಪನವಾಗಿದೆ.
ಇಂದು ಬೆಳಿಗ್ಗೆ 8:30ರ ಸುಮಾರಿಗೆ ಸಿಂದಗಿ ಪಟ್ಟಣದ ನಾಗೂರು ಬಡಾವಣೆ, ಶಿವಶಂಕರ ಬಡಾವಣೆ, ವಿದ್ಯಾನಗರ, ಜ್ಯೋತಿನಗರ ಸೇರಿದಂತೆ ಹಲವೆಡೆಗಳಲ್ಲಿ ಭೂಮಿ ಕಂಪಿಸಿದೆ. ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ.
ಅಕ್ಟೋಬರ್ 1ರಂದು ಹಾಗೂ 2ರಂದು ಜಿಲ್ಲೆಯ ಬಾಬಾನಗರ, ಸೋಮದೇವರಹಟ್ಟಿ, ಸಿದ್ದಾಪುರ ಕೆ, ಘೋಣಸಗಿ ಸೇರಿದಂತೆ ಹಲವೆಡೆಗಳಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 2.5ರಷ್ಟು ತೀವ್ರತೆ ದಾಖಲಾಗಿತ್ತು. ಇದರ ಬೆನ್ನಲ್ಲೇ ಇಂದು ಬೆಳಿಗ್ಗೆ ಕೂಡ ಮತ್ತೆ ಭೂಕಂಪವಾಗಿದ್ದು, ಪದೇ ಪದೇ ಭೂಕಂಪವಾಗುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ.