‘ರಾಮಾಯಣ’ದಲ್ಲಿ ರಾವಣನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟ ಅರವಿಂದ್ ತ್ರಿವೇದಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಅರವಿಂದ್ ಅವರೊಂದಿಗೆ ‘ರಾಮಾಯಣ’ದ ಸಹನಟರಾಗಿದ್ದ ಸುನೀಲ್ ಲಾಹಿರಿ ದಿವಂಗತ ನಟನ ಚಿತ್ರವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದು ಇದು ತುಂಬಾ ದುಃಖದ ಸುದ್ದಿ. ನಮ್ಮ ಪ್ರೀತಿಯ ಅರವಿಂದ್ ಭಾಯಿ(ರಾಮಾಯಣದ ರಾವಣ) ಇನ್ನು ಮುಂದೆ ನಮ್ಮೊಂದಿಗಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ನಾನು ನನ್ನ ತಂದೆ ಮತ್ತು ನನ್ನ ಮಾರ್ಗದರ್ಶಕ, ಹಿತೈಷಿ ಮತ್ತು ಸಂಭಾವಿತ ವ್ಯಕ್ತಿಯನ್ನು ಕಳೆದುಕೊಂಡೆ ಎಂದು ಟ್ವೀಟ್ ಮಾಡಿದ್ದಾರೆ. ‘
ಅರವಿಂದ್ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಅವರು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಕೆಲವು ವರ್ಷಗಳಿಂದ ಅಸ್ವಸ್ಥರಾಗಿದ್ದರು ಎಂದು ಅರವಿಂದ್ ಅವರ ಸಂಬಂಧಿ ಕೌಸ್ತುಭ್ ತ್ರಿವೇದಿ ಹೇಳಿದ್ದಾರೆ.
ಅವರು ಕಳೆದ ತಿಂಗಳು ಮಾತ್ರ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಮಂಗಳವಾರ ರಾತ್ರಿ 9:30 ರ ಸುಮಾರಿಗೆ ಮುಂಬೈನ ಕಾಂಡಿವಲಿ ನಿವಾಸದಲ್ಲಿ ಹೃದಯಾಘಾತಕ್ಕೊಳಗಾದರು. ಅಂತ್ಯಸಂಸ್ಕಾರವನ್ನು ಬುಧವಾರ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ರಮಾನಂದ ಸಾಗರ್ ನಿರ್ದೇಶಿಸಿ ಮತ್ತು ನಿರ್ಮಿಸಿದ್ದ ರಾಮಾಯಣ 1987 ರಲ್ಲಿ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಕಳೆದ ವರ್ಷ ಲಾಕ್ ಡೌನ್ ಘೋಷಿಸಿದ ನಂತರ ಮರು ಪ್ರದರ್ಶನ ಕಂಡಿತ್ತು.