ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಜೀಪ್ ನುಗ್ಗಿಸಿ ಹತ್ಯೆ ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ನುಗ್ಗಿ ಬಂದ ಜೀಪ್ ರೈತರ ಮೇಲೆಯೇ ನುಗ್ಗಿದೆ. ರೈತರು ಮೃತಪಡುತ್ತಿದ್ದಂತೆ ಹಿಂಸಾಚಾರ ನಡೆದಿದ್ದು, ನಾಲ್ವರು ರೈತರು, ನಾಲ್ವರು ಬಿಜೆಪಿ ಕಾರ್ಯಕರ್ತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ.
ದೇಶಾದ್ಯಂತ ಪ್ರಕರಣಗಳ ಆಕ್ರೋಶದ ಕಿಚ್ಚು ಹೊತ್ತಿಸಿದ ಪ್ರಕರಣ ಇದಾಗಿದೆ. ಭಾನುವಾರ ಲಖೀಂಪುರ ಖೇರಿ ಜಿಲ್ಲೆಯ ಟಿಕೋನಿಯಾದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ರೈತರ ಮೇಲೆ ಜೀಪ್ ನುಗ್ಗಿಸಿದ ಆರೋಪ ಕೇಳಿಬಂದಿದೆ.
ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಮೃತರ ಕುಟುಂಬಕ್ಕೆ ತಲಾ 45 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಘೋಷಣೆ ಮಾಡಿದೆ. ಅಜಯ್ ಮಿಶ್ರಾ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿದ್ದು, ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಲು ತೀರ್ಮಾನಿಸಲಾಗಿದೆ.
ರೈತರ ಮೇಲೆ ಜೀಪ್ ಓಡುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಮೋದಿ ಸರ್ಕಾರದ ಮೌನದ ಬಗ್ಗೆ ಪ್ರಶ್ನಿಸಲಾಗಿದೆ.