ತನ್ನ ಮರ್ಸಿಡೀಸ್ ಕಾರನ್ನು ಕದಿಯಲು ಯತ್ನಿಸುತ್ತಿದ್ದ ಆರೋಪಿಯನ್ನು ವಿದ್ಯಾರ್ಥಿನಿಯೊಬ್ಬಳು ಚಾಲಾಕಿತನದಿಂದ ಕಟ್ಟಿಹಾಕಿದ್ದಾಳೆ. ನಂತರ ಕಳ್ಳನನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಸೆಪ್ಟೆಂಬರ್ 29 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ವಿದ್ಯಾರ್ಥಿನಿಯು ತನ್ನ ಮರ್ಸಿಡಿಸ್ ಎ 45 ಕಾರನ್ನು ತನ್ನ ಮನೆಯ ಹೊರಗೆ ನಿಲ್ಲಿಸಿದ್ದಳು. ಆದರೆ ಅವಳು ರಾತ್ರಿ 9 ಗಂಟೆಗೆ ತನ್ನ ಕಿಟಕಿಯಿಂದ ಇಣುಕಿ ನೋಡಿದಾಗ, ಕಾರಿನೊಳಗೆ ಅಪರಿಚಿತ ವ್ಯಕ್ತಿ ಕುಳಿತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾಳೆ.
ಕಾರಿನೊಳಗಿನ ಬೆಳಕಿನಿಂದ ಅಪರಿಚಿತನ ಮುಖ ಸ್ಪಷ್ಟವಾಗಿ ಗೋಚರಿಸಿದೆ. ತಡಮಾಡದೆ, ಆಕೆ ಕಾರನ್ನು ಲಾಕ್ ಮಾಡಿ, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಕಳ್ಳ ಕಾರನ್ನು ಅನ್ ಲಾಕ್ ಮಾಡುತ್ತಿದ್ದಾಗಲೆಲ್ಲಾ ಈಕೆ ಮರುಲಾಕ್ ಮಾಡಿದ್ದಾಳೆ. ಹೊರಬರಲು ಸಾಧ್ಯವಾಗದೆ ಕಳ್ಳ ಕಾರಿನೊಳಗೆ ಲಾಕ್ ಆಗಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಕಳ್ಳನನ್ನು ಕಾರಿನೊಳಗೆ ಲಾಕ್ ಮಾಡಿದ ನಂತರ, ಆಕೆ ತನ್ನ ಮನೆಯಿಂದ ಇಡೀ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾಳೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗಿದ್ದು, ಈಕೆಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://youtu.be/Ns0o0LKNOqU