ಅಕ್ಟೋಬರ್ 30 ರಂದು ಸಿಂದಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆ ನಿಗದಿಯಾಗಿದ್ದು, ಉಪಚುನಾವಣೆಗೆ ಬಿಜೆಪಿ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಯಡಿಯೂರಪ್ಪ ಆಡಳಿತದ ಸಂದರ್ಭದಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಉಸ್ತುವಾರಿಯಾಗಿ ನಿಯೋಜಿಸಲಾಗಿದೆ. ಆದರೆ, ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಚುನಾವಣೆ ಉಸ್ತುವಾರಿ ಕೈತಪ್ಪಿದೆ.
ಬಿ.ಎಸ್.ವೈ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ವಿಜಯೇಂದ್ರ ಅವರನ್ನು ಹೊರಗಿಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಉಪಚುನಾವಣೆ ಗೆಲುವಿನ ರೂವಾರಿ ಎಂದೇ ಹೇಳಲಾಗುತ್ತಿದ್ದ ಹಿಂದೆ ಹಲವು ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲದ ಕ್ಷೇತ್ರಗಳಲ್ಲೂ ಗೆಲುವಿಗೆ ಕಾರಣರಾಗಿದ್ದ ವಿಜಯೇಂದ್ರ ಅವರಿಗೆ ಈ ಬಾರಿ ಉಪಚುನಾವಣೆ ಜವಾಬ್ದಾರಿಯಿಂದ ಹೊರಗಿಟ್ಟಿರುವುದು ಅವರ ಬೆಂಬಲಿಗರಲ್ಲಿ ಆಕ್ರೋಶ ತಂದಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ವಿಜಯೇಂದ್ರ ಬೆಂಬಲಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುತಂತ್ರದಿಂದ ವಿಜಯೇಂದ್ರ ಅವರಿಗೆ ಉಪಚುನಾವಣೆ ಉಸ್ತುವಾರಿ ತಪ್ಪಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.