ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಹೆಚ್ಎಎಲ್ ಸಮೀಪ ರಮೇಶ ನಗರದಲ್ಲಿ ಗೋಡೆ ಕುಸಿದಿದೆ. ಹೆಚ್ಎಎಲ್ ಗೆ ಸೇರಿದ 12 ಅಡಿ ಎತ್ತರದ 100 ಮೀಟರ್ ಉದ್ದದ ಗೋಡೆ ಕುಸಿದಿದ್ದು, ಆಟೋ, ಕಾರ್, ಬೈಕ್ ಸೇರಿದಂತೆ 10 ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಧಾರಾಕಾರ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡು ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನೀರುನುಗ್ಗಿದೆ. ಮನೆಗಳು, ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದೆ. ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದ ಕಾರಣ ವಾಹನ ಸವಾರರು ಪರದಾಡುವಂತಾಗಿತ್ತು.
ಹಲವೆಡೆ ಮರ ಮತ್ತು ಮರದ ಕೊಂಬೆಗಳು ಮುರಿದು ಬಿದ್ದಿದೆ. ಅಂಡರ್ ಪಾಸ್ ಗಳು ಜಲಾವೃತಗೊಂಡಿವೆ. ಭಾರಿ ಗಾಳಿ ಮಿಂಚು ಸಹಿತ ಸುರಿದ ಮಳೆಗೆ ಫ್ರೇಜರ್ ಟೌನ್, ಮಲ್ಲೇಶ್ವರಂ 6ನೇ ಕ್ರಾಸ್, ರಾಜಕುಮಾರ್ ರಸ್ತೆ ಮೊದಲಾದ ಕಡೆಗಳಲ್ಲಿ ಮಳೆ ಅವಾಂತರ ಸೃಷ್ಟಿಯಾಗಿದೆ.