ಸ್ಮಾರ್ಟ್ಫೋನ್ ಅತಿಯಾಗಿ ಬಳಕೆ ಮಾಡದಂತೆ ತಂದೆ ತಾಕೀತು ಮಾಡಿದ್ದರಿಂದ ಮನನೊಂದ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಮಂಗಳವಾರ ಬೆಂಕಿ ಹಚ್ಚಿಕೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಗುರುವಾರ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಿನಗೂಲಿ ನೌಕರರಾಗಿದ್ದ ಪೋಷಕರು ಮಗಳ ಆನ್ಲೈನ್ ತರಗತಿಗಾಗಿ ಸ್ಮಾರ್ಟ್ಫೋನ್ ಖರೀದಿ ಮಾಡಿದ್ದರು ಎನ್ನಲಾಗಿದೆ.
ಮಿಯಾಪುರದ ಹಫೀಜ್ಪೇಟೆ ನಿವಾಸಿಯಾಗಿದ್ದ 13 ವರ್ಷದ ಮೃತ ಬಾಲಕಿ ಕೇಸರಾದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತರಗತಿಗಳು ಆರಂಭವಾಗಿದ್ದರೂ ಸಹ ಮನೆಯಲ್ಲೇ ಇದ್ದ ಬಾಲಕಿ ಆನ್ಲೈನ್ ಕ್ಲಾಸ್ ಗೆ ಹಾಜರಾಗುತ್ತಿದ್ದಳು.
ತರಗತಿ ಮುಗಿದ ಬಳಿಕ ಬಾಲಕಿಯು ಮೊಬೈಲ್ ಫೋನ್ನಿಂದ ಸಂಬಂಧಿಗಳು ಹಾಗೂ ಸ್ನೇಹಿತರ ಜೊತೆ ಮಾತನಾಡುತ್ತಿದ್ದಳು. ಆಕೆಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವನಾದ ಪುರುಷ ಸಂಬಂಧಿಯೊಡನೆ ಮಗಳು ಅತಿಯಾಗಿ ಮಾತನಾಡುವುದನ್ನು ಗಮನಿಸಿದ ತಂದೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆದರೆ ತಂದೆ ಮಾತನ್ನು ಕೇಳಲು ಮಗಳು ಒಪ್ಪದ ಕಾರಣ ಆಕೆಯ ಮೊಬೈಲ್ ಫೋನ್ ಕಸಿದಿದ್ದ ತಂದೆ ಸಿಮ್ ಕಾರ್ಡ್ನ್ನು ಬದಲಾಯಿಸಿದ್ದ ಎನ್ನಲಾಗಿದೆ.
ಅಲ್ಲದೇ ಪುತ್ರಿಯ ಈ ನಡವಳಿಕೆ ಬಗ್ಗೆ ಗಮನ ಹರಿಸದೇ ಇದ್ದುದಕ್ಕೆ ಪತ್ನಿಗೆ ಕೂಡ ನಿಂದಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ಘಟನೆಗಳಿಂದ ಮನನೊಂದಿದ್ದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಶುಕ್ರವಾರ ಸಾವನ್ನಪ್ಪಿದ್ದಾಳೆ.