ವಿದ್ಯಾರ್ಥಿನಿಗೆ ಅಸಂಬದ್ಧ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿದ ಕಾರಣಕ್ಕೆ ಕೊಯಂಬತ್ತೂರಿನಲ್ಲಿ ಕಾಲೇಜು ಉಪನ್ಯಾಸಕನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಕೊಯಂಬತ್ತೂರಿನ ಪೆರೂರಿನಲ್ಲಿರುವ ಕಲಾ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಅಮಾನತುಗೊಂಡಿರುವ ವ್ಯಕ್ತಿಯು ಇದೇ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕನಾಗಿದ್ದನು. ಘಟನೆಯ ಸಂಬಂಧ ತನಿಖೆಗಾಗಿ ಕಾಲೇಜಿನಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ. ವಿಶಾಕಾ ಸಮಿತಿ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ ಶಿಫಾರಸಿನ ಮೇಲೆ ಈ ಸಮಿತಿಯನ್ನು ರಚಿಸಲಾಗಿದೆ.
ಉಪನ್ಯಾಸಕ ತಿರುನಾವುಕರಸು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪಿಸಿ ಕಾಲೇಜಿನ ಮಾಜಿ ವಿದ್ಯಾರ್ಥಿ ಸತೀಶ್ ಕುಮಾರ್ ಎಂಬವರು ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ ಕಾಲೇಜು ಉಪನ್ಯಾಸಕನ ಬಳಿ ಮೂರು ದಿನಗಳ ಒಳಗಾಗಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಆದರೆ ಉಪನ್ಯಾಸಕನಿಗೆ ನೀಡಲಾದ ನೋಟಿಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಪತ್ರದಲ್ಲಿ ಸೆಪ್ಟೆಂಬರ್ 27ರಂದು ಉಪನ್ಯಾಸಕ ತನ್ನ ಸ್ಪಷ್ಟನೆಯನ್ನು ನೀಡಿದ್ದಾನೆ. ಆದರೆ ಇದು ಸಮಂಜಸ ಎಂದು ಕಾಣದ ಹಿನ್ನೆಲೆಯಲ್ಲಿ ಉಪನ್ಯಾಸಕನನ್ನು ಅಮಾನತು ಮಾಡಲಾಗಿದೆ.