ತಮಿಳುನಾಡಿನ ಚಿದಂಬರಂ ಕ್ಷೇತ್ರದ ಸಂಸದ ತಿರುಮಾವಲವನ್ ಪಕ್ಷದ ಧ್ವಜದ ಕುರಿತಾದ ಟ್ವೀಟ್ ಮಾಡುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪಕ್ಷದ ಸದಸ್ಯರೊಬ್ಬರು ತಮ್ಮ ಪಕ್ಷದ ಧ್ವಜವನ್ನು ಹಾರಿಸುತ್ತಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ತಿರುಮಾವಲನ್, ‘ಇಂದು ನಮ್ಮ ಪಕ್ಷದ ಧ್ವಜ, ನಾಳೆ ನಮ್ಮ ರಾಷ್ಟ್ರ ಧ್ವಜ’ ಎಂದು ಬರೆದುಕೊಂಡಿದ್ದಾರೆ. ಡಿಎಂಕೆ ಮಿತ್ರ ಪಕ್ಷದ ಸಂಸದನ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವಿವಾದಕ್ಕೆ ಕಾರಣವಾಗಿದೆ.
ಸಂಸದ ತಿರುಮಾವಲವನ್ ತಮಿಳುನಾಡಿದ ಆಡಳಿತಾರೂಡ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ತಮಿಳು ರಾಷ್ಟ್ರೀಯವಾದಿ, ಜಾತಿ ಸಂಘಟನೆಯಾದ ವಿಠಿತಲೈ ಚಿರುತೈಗಲ್ ಕಚ್ಚಿಯ ಅಧ್ಯಕ್ಷರಾಗಿದ್ದಾರೆ. ತಿರುಮಾವಲವನ್ ಈ ಟ್ವೀಟ್ನಿಂದ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳನ್ನು ಎದುರಿಸಿದ್ದಾರೆ. ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವ ಹಿಂದಿನ ತಾರ್ಕಿಕತೆಯನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ತಮಿಳುನಾಡಿನಲ್ಲಿ ವಿಸಿಕೆ ಪಕ್ಷವು ತನ್ನ ಜನಪ್ರಿಯತೆಯನ್ನು ಈಗಷ್ಟೇ ಗಳಿಸುತ್ತಿದೆ. 2021ರ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದ ವಿಸಿಕೆ 6ರಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು.
ದೇಗುಲಗಳ ನಗರಿ ಚಿದಂಬರಂನ ಸಂಸದರಾಗಿದ್ದರೂ ಸಹ ತಿರುಮಾವಳನ್ ಆಗಾಗ ಕೋಮುಸೌರ್ಹದತೆ ಮೇಲೆ ಪರಿಣಾಮ ಬೀರುವಂತಹ ಹೇಳಿಕೆಗಳನ್ನು ನೀಡಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಹಿಂದೂ ಧರ್ಮ ಹಾಗೂ ದೇವತೆಗಳನ್ನು ನಿಂದಿಸುವಂತೆ ಹೇಳಿಕೆಗಳನ್ನೂ ಈ ಹಿಂದೆ ನೀಡಿದ್ದರು. ಹಿಂದೂ ದೇವಾಲಯಗಳು ಕೊಳಕು ಹಾಗೂ ಅದರೊಳಗೆ ಇರುವ ದೇವರ ಮೂರ್ತಿಯು ಭಯಾನಕ ಗೊಂಬೆಗಳು ಎಂದು ಹೇಳುವ ಮೂಲಕ ಅನೇಕರ ಆಕ್ರೋಶಕ್ಕೆ ಕಾರಣರಾಗಿದ್ದರು.