ಪಡಿತರ ಚೀಟಿ ಅಕ್ರಮ ತಡೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅನೇಕ ಕ್ರಮಕೈಗೊಂಡಿದ್ದು, ಈಗಾಗಲೇ ಹಲವು ಮಂದಿ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ.
ಈಗ ಆಹಾರ ಇಲಾಖೆ ಅಕ್ರಮ ತಡೆಗೆ ಮತ್ತೊಂದು ಮಾರ್ಗ ಹುಡುಕಿಕೊಂಡಿದೆ. ಕಂದಾಯ ಇಲಾಖೆ ಇ -ಜನ್ಮ ತಂತ್ರಾಂಶದ ಮೂಲಕ ಜನನ-ಮರಣ ನೋಂದಣಿ ಪ್ರಮಾಣಪತ್ರ ನೀಡುತ್ತಿದ್ದು, ಈ ತಂತ್ರಾಂಶದಲ್ಲಿ ಮೃತಪಟ್ಟವರ ಮಾಹಿತಿ ಕಲೆ ಹಾಕಿದಾಗ 66,517 ಮೃತ ವ್ಯಕ್ತಿಗಳ ಹೆಸರಿನಲ್ಲಿ ಪಡಿತರ ಪಡೆದುಕೊಳ್ಳುತ್ತಿರುವುದು ಪತ್ತೆಯಾಗಿದೆ.
ಈಗಾಗಲೇ ಮರಣ ಹೊಂದಿದ ಮತ್ತು ಪಡಿತರ ಚೀಟಿಯಲ್ಲಿ ಮಾತ್ರ ಜೀವಂತವಾಗಿದ್ದ 66,517 ಮಂದಿ ಪತ್ತೆಯಾಗಿದ್ದಾರೆ. ಇದಲ್ಲದೆ, ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, ಜಮೀನುದಾರರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಆಹಾರ ಇಲಾಖೆಯ ಪತ್ತೆ ಕಾರ್ಯಾಚರಣೆಯಲ್ಲಿ ಗೊತ್ತಾಗಿದೆ.
ಅತಿ ಹೆಚ್ಚಿನ ಆದಾಯ ಹೊಂದಿರುವ ಮತ್ತು ಅರ್ಹತೆ ಇಲ್ಲದವರು ಕೂಡ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆದುಕೊಂಡಿದ್ದಾರೆ. 85,204 ಆದಾಯ ತೆರಿಗೆ ಪಾವತಿದಾರರು, 50,060 ಅಧಿಕ ಆದಾಯ ಹೊಂದಿದವರು, 2,18,125 ಮಂದಿ ಮೂರು ಹೆಕ್ಟೇರ್ ಗಿಂತ ಹೆಚ್ಚಿನ ಜಮೀನು ಹೊಂದಿದವರು, 2127 ಸರ್ಕಾರಿ ನೌಕರರು ಸೇರಿದಂತೆ ಹಲವು ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ಈ ರೀತಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡ 4.5 ಲಕ್ಷಕ್ಕೂ ಹೆಚ್ಚು ಪಡಿತರ ಅಕ್ರಮ ಪ್ರಕರಣ ಪತ್ತೆಹಚ್ಚಲಾಗಿದ್ದು, ಸರ್ಕಾರಕ್ಕೆ ವಾರ್ಷಿಕ 100 ಕೋಟಿಗೂ ಅಧಿಕ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.