ಅರ್ನಬ್ ಗೋಸ್ವಾಮಿ ಜೊತೆಗಿನ ಚರ್ಚೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಕ್ತಾರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ರಿಪಬ್ಲಿಕ್ ಚಾನೆಲ್ನ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಜೊತೆ ಮಾತನಾಡಿದ ಪಾಕಿಸ್ತಾನದ ತೆಹ್ರೀಕ್ ಇ ಇನ್ಸಾಫ್ ವಕ್ತಾರ ಅಬ್ದುಲ್ ಸಾಮದ್ ಯಾಕೂಬ್ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮ್ಮದ್ ಅಜ್ಮಲ್ ಕಸಬ್ ಹಾಗೂ ಇತರರು ಪಾಕಿಸ್ತಾನದವರು ಎಂದು ಹೇಳಿದ್ದಾರೆ.
ಚರ್ಚೆಯ ವೇಳೆ ಪಾಕಿಸ್ತಾನದ ಮೇಲೆ ಆಕ್ರೋಶ ವ್ಯಕ್ತಪಡಿಸಿದ ನಿವೃತ್ತ ಮೇಜರ್ ಜನರಲ್ ಜಿ.ಡಿ ಭಕ್ಷಿ, ಅಲ್ಖೈದಾ ಭಯೋತ್ಪಾದಕ ಒಸಮಾ ಬಿನ್ ಲಾಡೆನ್ ಪಾಕಿಸ್ತಾನ್ ಮಿಲಿಟರಿ ನೆಲೆಯ ಸಮೀದಲ್ಲೇ ತಲೆಮರೆಸಿಕೊಂಡಿದ್ದನ್ನು ಉಲ್ಲೇಖಿಸುವ ಮೂಲಕ ಇಸ್ಲಾಮಾಬಾದ್ನಲ್ಲಿ ಭಯೋತ್ಪಾದಕರಿಗೆ ಪೋಷಣೆ ನೀಡಲಾಗ್ತಿದೆ ಎಂದು ಹೇಳಿದ್ರು. ‘ಪಾಕಿಸ್ತಾನ ಸೇನಾ ನೆಲೆಯಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿರುವ ಬಂಗಲೆಯಲ್ಲಿಯೇ ಪತ್ನಿಯರ ಜೊತೆ ಒಸಾಮಾ ವಾಸವಿದ್ದನು ಎಂದು ಹೇಳಿದ್ರು.
2008ರ ನವೆಂಬರ್ 26ರಂದು ಲಷ್ಕರ್ ಎ ತೊಯ್ಬಾ ಮುಂಬೈನಲ್ಲಿ 12 ಸಂಘಟಿತ ಗುಂಡಿನ ದಾಳಿಯನ್ನು ನಡೆಸಿತ್ತು. ದಾಳಿಯಲ್ಲಿ 9 ಮಂದಿ ಭಯೋತ್ಪಾದಕರು ಸೇರಿದಂತೆ 174 ಮಂದಿ ಸಾವನ್ನಪ್ಪಿದ್ದರು. ಈ ಸರಣಿ ದಾಳಿಯಲ್ಲಿ ಪೊಲೀಸರು ಸೆರೆಹಿಡಿದ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್. ಆತನನ್ನು 2012 ನವೆಂಬರ್ 12ರಂದು ಬೆಳಗ್ಗೆ 7:30ಕ್ಕೆ ಗಲ್ಲಿಗೇರಿಸಲಾಗಿತ್ತು.
ಭಯೋತ್ಪಾದಕ ಕೃತ್ಯಗಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದು ಇದೇ ಮೊದಲೇನಲ್ಲ. ಭಾರತೀಯ ಸೇನೆ ಸೆರೆಹಿಡಿದಿದ್ದ ಉಗ್ರ ಅಲಿ ಬಾಬರ್ ಪಾತ್ರಾ, ಪಾಕಿಸ್ತಾನ ಸೇನೆಯೇ ನಮಗೆ ತರಬೇತಿ ನೀಡಿತ್ತು ಎಂಬ ವಿಚಾರವನ್ನು ಕ್ಯಾಮರಾ ಮುಂದೆ ಒಪ್ಪಿಕೊಂಡಿದ್ದನು. ಅಲ್ಲದೇ ತಮ್ಮ ತಾಯಿಯ ಚಿಕಿತ್ಸೆಗೆ 25000 ರೂಪಾಯಿಯನ್ನೂ ನೀಡಿದ್ದರು. ಅಲ್ಲದೇ ಪಾಕಿಸ್ತಾನ ಸೇನೆಯೇ ಜಮ್ಮು ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆಗೆ ಸಹಾಯ ಮಾಡುತ್ತಿದೆ ಎಂದು ಒಪ್ಪಿಕೊಂಡಿದ್ದನು.