ಯುಎಇಗೆ ತೆರಳಿದ್ದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ಗೆ ಮರೆಯಲಾಗದ ಉಡುಗೊರೆಯೊಂದು ದೊರಕಿದೆ. ಹೌದು..! ರಿಯಾಜ್ ಕಿಲ್ಟೋನ್ ಎಂಬ ಮಲಯಾಳಿ ಉದ್ಯಮಿಯು ಅಲ್ಲು ಅರ್ಜುನ್ಗೆ ಬರೋಬ್ಬರಿ 160 ವರ್ಷ ಪುರಾತನ ಪಿಸ್ತೂಲ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಲ್ಲು ಅರ್ಜುನ್ ಕೊನೆಯದಾಗಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಅಲಾ ವೈಕುಂಟಪುರಮುಲು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಏಕಕಾಲದಲ್ಲಿ ಕೇರಳದಲ್ಲಿ ಅಂಗು ವೈಕುಟಂಪುರಥು ಆಗಿ ತೆರೆಕಂಡಿತ್ತು. ಈ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಯ್ತು ಅಂದರೆ 2020ರ ಬ್ಲಾಕ್ ಬಸ್ಟರ್ ಹಿಟ್ನಲ್ಲಿ ಸ್ಥಾನ ಪಡೆದಿದೆ. ಈ ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲೂ ಲಭ್ಯವಿದೆ. ಸದ್ಯ ಅಲ್ಲು ಅರ್ಜುನ್ರ ಪುಷ್ಪಾ ಸಿನಿಮಾಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ.
ಇತ್ತೀಚೆಗಷ್ಟೇ ಯುಎಇಗೆ ಭೇಟಿ ನೀಡಿದ್ದ ಅಲ್ಲು ಅರ್ಜುನ್ಗೆ ಅಭಿಮಾನಿ ಈ ರೀತಿಯಾಗಿ ಸಪ್ರೈಸ್ ನೀಡಿದ್ದಾರೆ. ಮಲಯಾಳಿ ಉದ್ಯಮಿ ರಿಯಾಜ್ ಕಿಲ್ಟೋನ್ ಈ ಪುರಾತನ ಪಿಸ್ತೂಲ್ ಉಡುಗೊರೆಯಾಗಿ ನೀಡಿದ್ದು ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದ್ಯ ಅಲ್ಲು ಅರ್ಜುನ್ ಸುಕುಮಾರ್ ನಿರ್ದೇಶನದ ಪುಷ್ಪಾ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಮೊದಲ ಭಾಗವು ಈ ವರ್ಷದ ಕ್ರಿಸ್ಮಸ್ನಲ್ಲಿ ತೆರೆಕಾಣಲಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಫಹಾದ್ ಫಾಸಿಲ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಪುಷ್ಪಾ ಹೊರತುಪಡಿಸಿ ಅಲ್ಲು ಅರ್ಜುನ್ ನಿರ್ದೇಶಕರಾದ ವೇಣು ಶ್ರೀರಾಮ್ ಹಾಗೂ ಕೋರಾಟಲ ಶಿವರ ಸಿನಿಮಾಗಳಿಗೂ ಸಹಿ ಹಾಕಿದ್ದಾರೆ. ಇದರ ಜೊತೆಯಲ್ಲಿ ನಿರ್ದೇಶಕ ಎ.ಆರ್. ಮುರುಗಡೋಸ್ ಹಾಗೂ ಕೆಜಿಎಫ್ ಸೂತ್ರಧಾರಿ ಪ್ರಶಾಂತ್ ನೀಲ್ ಜೊತೆಯೂ ಮಾತುಕತೆ ನಡೆಸುತ್ತಿದ್ದಾರೆ.