ಸಾಲು ಸಾಲು ಹಬ್ಬಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀತಿ ಆಯೋಗದ ಸದಸ್ಯರು ಭಾರತೀಯರ ಬಳಿ ಮನವಿ ಮಾಡಿದ್ದಾರೆ. ಕೊರೊನಾ ವೈರಸ್ ಮತ್ತೊಮ್ಮೆ ತನ್ನ ಭೀಕರತೆ ಪ್ರದರ್ಶಿಸುವ ಹಿನ್ನೆಲೆಯಲ್ಲಿ ಆದಷ್ಟು ಮನೆಯಲ್ಲಿಯೇ ನಿಮ್ಮ ಕುಟುಂಬಸ್ಥರ ಜೊತೆ ಹಬ್ಬ ಆಚರಿಸಿ ಎಂದು ಪಾಲ್ ಕಿವಿಮಾತು ಹೇಳಿದ್ದಾರೆ.
ಭಾರತದ ಭವ್ಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಈ ಬಾರಿ ನಮ್ಮ ಕುಟುಂಬಸ್ಥರ ಜೊತೆ ಸಂಭ್ರಮಿಸಲು ಸೀಮಿತ ಮಾಡೋಣ. ಅಲ್ಲದೇ ಮನೆಯಲ್ಲಿ ಅರ್ಹ ವ್ಯಕ್ತಿಗಳೆಲ್ಲರೂ ಕೊರೊನಾ ಲಸಿಕೆಯನ್ನು ತಪ್ಪದೇ ಸ್ವೀಕರಿಸಿ ಎಂದು ಪಾಲ್ ಮನವಿ ಮಾಡಿದ್ರು.
ಸಾಲು ಸಾಲು ಹಬ್ಬಗಳ ಆಗಮನ ಹಿನ್ನೆಲೆಯಲ್ಲಿ ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಜಮಾಯಿಸುವುದು ಬೇಡ. ಒಂದು ವೇಳೆ ಸಾರ್ವಜನಿಕ ಸ್ಥಳಕ್ಕೆ ಭೇಟಿ ನೀಡಲೇಬೇಕಾದ ಅನಿವಾರ್ಯತೆ ಬಂದರೂ ಸಹ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿರಲಿ ಎಂದು ಹೇಳಿದ್ದಾರೆ.
ಹಬ್ಬವನ್ನು ಆಚರಿಸಲು ಇನ್ಮುಂದೆ ಸಾಕಷ್ಟು ಅವಕಾಶಗಳು ಸಿಗಲಿದೆ. ಈಗ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೆಚ್ಚು ಮುಖ್ಯ ಎಂದು ಪಾಲ್ ಹೇಳಿದ್ರು.
ಕೆಲವು ಪ್ರದೇಶಗಳಲ್ಲಿ ಈಗಲೂ ಕೊರೊನಾ ವೈರಸ್ ಸೋಂಕು ಹೆಚ್ಚಾಗಿಯೇ ಇದೆ. ಇನ್ನು ಹಲವು ಕಡೆಗಳಲ್ಲಿ ಸೋಂಕು ತಹಬದಿಗೆ ಬಂದಿದೆ. ಕೊರೊನಾ 2ನೇ ಅಲೆಯು ಇನ್ನೂ ದೇಶದಲ್ಲಿದೆ. ಹೀಗಾಗಿ ಜನಸಂದಣಿ ಸೇರುವುದು ಸೂಕ್ತವಲ್ಲ. ಈ ರೀತಿ ಮಾಡಿದರೆ ನಾವೇ ಕೊರೊನಾ ವೈರಸ್ಗೆ ಮತ್ತೊಮ್ಮೆ ಆಮಂತ್ರಣ ನೀಡಿದಂತೆ ಆಗಲಿದೆ ಎಂದು ಹೇಳಿದ್ರು.