ನವದೆಹಲಿ: ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರಿಂದರ್ ಸಿಂಗ್ 24 ಗಂಟೆಯಲ್ಲಿ ಎರಡು ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಮರಿಂದರ್ ಸಿಂಗ್ ನಾನು ಬಿಜೆಪಿಗೆ ಸೇರ್ಪಡೆ ಆಗುತ್ತಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮರಿಂದರ್ ಸಿಂಗ್, ನನಗೆ ಆಗಿರುವ ಅವಮಾನ ಸಹಿಸಲಾರದೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದು ನಿಜ. ಆದರೆ ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿನ ಹಲವು ಬೆಳವಣಿಗೆ ಹಾಗೂ ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿರುವುದರ ಬಗ್ಗೆ ಬೇಸರವಿದೆ. ಇಲ್ಲಿಯವರೆಗೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ. ಆದರೆ ಇನ್ನುಮುಂದೆ ಪಕ್ಷದಲ್ಲಿ ಮುಂದುವರೆಯಲು ಇಚ್ಛಿಸಲ್ಲ. ನನ್ನನ್ನು ಪಕ್ಷ ಸೂಕ್ತ ರೀತಿಯಲ್ಲಿ ನಡೆಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ನವಜೋತ್ ಸಿಂಗ್ ಸಿಧು ಅವರಂತಹ ಚೈಲ್ಡಿಶ್ ವ್ಯಕ್ತಿಗೆ ಕಾಂಗ್ರೆಸ್ ನಲ್ಲಿ ದೊಡ್ಡ ಸ್ಥಾನ ನೀಡಲಾಯಿತು. ಆದರೆ ಆತ ಅದನ್ನು ಉಳಿಸಿಕೊಳ್ಳಲಿಲ್ಲ. ಪಕ್ಷಕ್ಕಾಗಿ ದುಡಿದ ನಮ್ಮಂತವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಬೆಳಿಗ್ಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿತು. ಪ್ರಶ್ನೆ ಮಾಡದೇ ಸಂಜೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.