ಉಡುಪಿಯ ಅಷ್ಟಮಠಗಳ ಪೈಕಿ ಒಂದಾದ ಶೀರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ವಿಚಾರವಾಗಿ ತೀರ್ಪು ಪ್ರಕಟಿಸಿದ ರಾಜ್ಯ ಹೈಕೋರ್ಟ್ ಬಾಲ ಸನ್ಯಾಸಿ ಪೀಠಾಧಿಪತಿಯಾಗಿ ಮುನ್ನಡೆಯಲು ಹಸಿರು ನಿಶಾನೆ ತೋರಿದೆ.
ಶೀರೂರು ಮಠಕ್ಕೆ 16 ವರ್ಷದ ವೇದವರ್ಧನ ತೀರ್ಥರನ್ನು ಪೀಠಾಧಿಪತಿಯಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಶೀರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸೇರಿದಂತೆ ನಾಲ್ವರು ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ ಸಂಬಂಧ ಇಂದು ತೀರ್ಪು ಪ್ರಕಟಿಸಿ ನ್ಯಾ. ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾ. ಸಚಿನ್ ಶಂಕರ್ ಮಗದಮ್, ಬೌದ್ಧ ಧರ್ಮದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಭಿಕ್ಕುಗಳಾಗುತ್ತಾರೆ. 18 ವರ್ಷ ಮೇಲಟ್ಟವರು ಮಾತ್ರ ಪೀಠಾಧಿಪತಿಯಾಗಬೇಕು ಎಂದು ಎಲ್ಲಿಯೂ ಉಲ್ಲೇಖವಿಲ್ಲ. ಶೀರೂರು ಮಠಕ್ಕೆ ಪೀಠಾಧಿಪತಿ ಆಯ್ಕೆ ಸೋದೆ ವಾದಿರಾಜ ಮಠದ ಪೀಠಾಧಿಪತಿಗೆ ಸೇರಿದ್ದು. ಇಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಸಂವಿಧಾನವನ್ನು ಉಲ್ಲಂಘಿಸದೇ ಧಾರ್ಮಿಕ ಹಕ್ಕುಗಳನ್ನು ಪಾಲಿಸಬಹುದು ಎಂದು ಹೇಳಿದ್ದಾರೆ.
ಶೀರೂರು ಮಠದ ಪೀಠಾಧಿಪತಿ ಆಯ್ಕೆ ವಿಚಾರದಲ್ಲಿ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ ಪೇಜಾವರ ತೀರ್ಥರು, ಧಾರ್ಮಿಕ ಗ್ರಂಥಗಳಲ್ಲಿ ಪ್ರೌಢತೆಯ ವಯಸ್ಸನ್ನು 13ರ ಬಳಿಕ ಎಂದು ಗುರುತಿಸಲಾಗಿದೆ. ಹದಿಮೂರರ ಬಳಿಕ ಪ್ರೌಢ ಎಂದು ಮಹಾಭಾರತದಲ್ಲಿಯೇ ಉಲ್ಲೇಖವಿದೆ. ಮೊದಲು ಎಂಟು ವರ್ಷದವರೆಗೆ ಬಾಲ್ಯ ಅಂತ ಇತ್ತು. ನಂತರ ಅಣಿಮಾಂಡವ್ಯ ಖುಷಿಗಳು ಅದನ್ನು 13 ವರ್ಷಕ್ಕೆ ವಿಸ್ತಾರ ಮಾಡಿದ್ರು. ಹೀಗಾಗಿ ಧಾರ್ಮಿಕ ನೆಲೆಯಲ್ಲಿ ಹದಿಮೂರು ವರ್ಷ ದಾಟಿದ್ರೆ ಪ್ರೌಢ ಅಂತ ಅರ್ಥ. ಶೀರೂರು ಮಠಕ್ಕೆ ನೇಮಕವಾದ ವ್ಯಕ್ತಿಗೆ ಹದಿಮೂರು ವರ್ಷ ಆಗಿದೆ. ಹೀಗಾಗಿ ಧಾರ್ಮಿಕ ನೆಲೆಯಲ್ಲಿ ಇದು ಬಾಲ್ಯ ಸನ್ಯಾಸ ಅಂತ ಆಗಲಿಲ್ಲ ಎಂದು ಹೇಳಿದ್ರು.