ಖಾಸಗಿ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರಿಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಬಿಗ್ ರಿಲೀಫ್ ನೀಡಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಪ್ರಸಕ್ತ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಸಕ್ತ ವರ್ಷ ಶುಲ್ಕ ಹೆಚ್ಚಳ ಮಾಡುವಂತಿಲ್ಲ ಎಂದು ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಕಾಲೇಜುಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ. ವಿವಿ ಶುಲ್ಕದ ಹೆಸರನ್ನು ಅನೇಕರು ದುರುಪಯೋಗಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಶುಲ್ಕವನ್ನು ಪಡೆಯದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗಾ ವಹಿಸಬೇಕು.ಪರೀಕ್ಷಾ ಪ್ರಾಧಿಕಾರದಿಂದಲೇ ಶುಲ್ಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಲಿದೆ. ಸ್ಕಿಲ್ ಟ್ರೇನಿಂಗ್ ಫೀಸ್ ತೆಗೆದುಕೊಳ್ಳುವುದು ಕಡ್ಡಾಯವಲ್ಲ. ವಿಟಿಯುಗೆ ಭೇಟಿ ನೀಡಿ ಒಪ್ಪಿಗೆ ಕೊಟ್ಟ ಬಳಿಕ ಶುಲ್ಕ ಪಡೆಯಬೇಕು. ವಿಟಿಯು ಒಪ್ಪಿಗೆ ಇಲ್ಲದೆಯೇ ಸ್ಕಿಲ್ ಫೀ ಸಂಗ್ರಹ ಮಾಡುವಂತಿಲ್ಲ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಇದು ಮಾತ್ರವಲ್ಲದೇ ರಾಜ್ಯದಲ್ಲಿ ನಾಲ್ಕು ಕಾಲೇಜುಗಳಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಆರಂಭವಾಗಲಿದೆ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು, ಎಸ್ಜೆಆರ್ ಚಿಕ್ಕಬಳ್ಳಾಪುರ, ಭಾಲ್ಕಿಯ ಭೀಮಣ್ಣ ಖಂಡ್ರೆ ಕಾಲೇಜು ಹಾಗೂ ವಿಜಯಪುರದ ಬಿಎಲ್ಡಿಇ ಕಾಲೇಜುಗಳಲ್ಲಿ ಪ್ರಸಕ್ತ ವರ್ಷದಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಬಹುದಾಗಿದೆ. ಇದಕ್ಕಾಗಿ ಕನ್ನಡದಲ್ಲೇ ಪಠ್ಯ ವಸ್ತು ಸಿದ್ಧವಾಗಿದೆ ಎಂದು ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.