ಆರ್.ಎಸ್.ಎಸ್. ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ ಎಂದು ಪ್ರಶ್ನೆ ಮಾಡಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸರಣಿ ಟ್ವೀಟ್ಗಳ ಮೂಲಕ ತಿರುಗೇಟು ನೀಡಿದ್ದಾರೆ.
ನಿಮ್ಮ ಪಕ್ಷದ ಆಡಳಿತದಲ್ಲಿ ಅಲ್ಲವೇ ಸಿದ್ದರಾಮಯ್ಯನವರೇ, ತಾಲಿಬಾನಿಗಳನ್ನು, ಐಎಸ್ಐ ಉಗ್ರರನ್ನು ಭಾರತದೊಳಕ್ಕೆ ನುಸುಳಲು ಬಿಟ್ಟು ಮುಂಬೈ ಹಾಗು ಇನ್ನಿತರ ಭಾಗಗಳಲ್ಲಿ ಉಗ್ರರ ದಾಳಿಯಾಗುವಂತೆ ಮಾಡಿದ್ದು ?ನೂರಾರು ಮುಗ್ದರ ಸಾವಿನ ಭಾರ ನಿಮ್ಮ ಪಕ್ಷದ ಮೇಲಿರುವುದನ್ನು ಮರೆತುಬಿಟ್ಟರಾ ಸಿದ್ದರಾಮಯ್ಯನವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಪಕ್ಷದಲ್ಲೇ ಕೇಂದ್ರದಲ್ಲಿ ವಿತ್ತ ಸಚಿವರಾಗಿ, 40 ವರ್ಷ ರಾಜಕೀಯ ಜೀವನದಲ್ಲಿ ಇದ್ದು 13ನೇ ರಾಷ್ಟ್ರಪತಿಯಾಗಿ ನಿಧನರಾದ ಪ್ರಣವ್ ಮುಖರ್ಜಿ ಅವರ ಜೀವನ ಚರಿತ್ರೆಯನ್ನು ಒಮ್ಮೆ ಓದಿ. ಆರ್.ಎಸ್.ಎಸ್. ಅಂದರೇನು ಎಂಬುದನ್ನು ಅವರು ವಿವರಿಸಿದ್ದಾರೆ. ಆಗಲಾದರೂ ಆರ್.ಎಸ್.ಎಸ್. ಬಗ್ಗೆ ನಿಮ್ಮ ಧೋರಣೆ ಬದಲಾಗಬಹುದು ಎಂದು ಟ್ವೀಟಾಯಿಸಿದ್ದಾರೆ.
ಯುದ್ಧ, ಪ್ರವಾಹಗಳು ಈ ದೇಶದ ಯಾವುದೇ ಮೂಲೆಯಲ್ಲಿ ಘಟಿಸಿದಾಗ ಅಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರು ಮೊದಲು ಹಾಜರಾಗಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯದ ಹಸ್ತವನ್ನು ಚಾಚುತ್ತಾರೆ. ಸ್ವಯಂಸೇವಕರು ತಮ್ಮ ಪ್ರಾಣವನ್ನು ಪಣವಾಗಿಟ್ಟು ರಕ್ಷಣೆ ಮಾಡುತ್ತಾರೆ. ಸಂಘದ ನಿಸ್ವಾರ್ಥ ಸೇವೆಯನ್ನು ತಾಲಿಬಾನಿಗೆ ಹೋಲಿಸಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಎಂದು ಪ್ರಶ್ನಿಸಿದ್ದಾರೆ.
ಆರ್.ಎಸ್.ಎಸ್. ಕಾರ್ಯಕರ್ತರು ಮಾಡಿರುವ ನಿಸ್ವಾರ್ಥ ಸೇವೆ ನಿಮಗೆ ಕಣ್ಣಿಗೆ ಕಂಡಿರಲಿಕ್ಕಿಲ್ಲ. ಅಸ್ಸಾಂನ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ, ಈಗಿನ ಕೋವಿಡ್ ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದಾಗ ಸೇವಕರು ತಮ್ಮ ಮನೆಯಲ್ಲಿದ್ದ ಅಕ್ಕಿ-ಬೇಳೆ ಮತ್ತಿತರ ಪಡಿತರಗಳನ್ನು ನಿರ್ಗತಿಕರಿಗೆ ಹಂಚುವ ಉದಾರತೆಯನ್ನು ಮೆರೆದರು. ಈ ದೇಶ ಜಾತ್ಯಾತೀತ ತತ್ವಗಳ ಮೇಲೆ ನಿಂತಿದೆ, ಸಂಘ ಯಾರನ್ನೂ ಗುತ್ತಿಗೆ ಪಡೆದಿಲ್ಲ. ನಿಮ್ಮ ಪಕ್ಷದ ಉಳಿಗೆ ಮಾನ್ಯ ಪದ್ಧತಿಯನ್ನು ನೀವು ತೋರಿಸಿಕೊಟ್ಟಿದ್ದೀರಿ. ದೇಶ ಸೇವೆ ಮಾಡಬೇಕೆಂದರೆ ರಾಜಕೀಯಕ್ಕೆ ಬರಬೇಕೆಂದಿಲ್ಲ ಸಿದ್ದರಾಮಯ್ಯನವರೇ. ಬಲಹೀನರಿಗೆ ಬೆಳಕಾಗಲು ಸಂಘ ಕೊಟ್ಟ ಕೊಡುಗೆಗಳನ್ನು ನಾವು ತಿಳಿಸುತ್ತೇವೆ, ಒಮ್ಮೆ ಸಂಘದ ಶಾಖೆಗೆ ಬನ್ನಿ ಎಂದು ಟ್ವೀಟ್ ಮೂಲಕ ಛಾಟಿ ಬೀಸಿದ್ದಾರೆ.
ಬಿಜೆಪಿ ಮತ್ತು ಆರ್.ಎಸ್.ಎಸ್.ಗೂ ಏನು ಸಂಬಂಧ ಎಂದು ಕೇಳಿದ್ದೀರಲ್ಲವೇ ? ತಾಯಿ ಮತ್ತು ಮಕ್ಕಳ ಸಂಬಂಧ. ಅದು ಕಾರ್ಖಾನೆಯಲ್ಲ. ದೇಶವನ್ನು ಸಂಘಟಿಸಲು ಮತ್ತು ಗಟ್ಟಿಯಾಗಿ ಭಾರತವನ್ನು ಕಟ್ಟಲು ಕಾರ್ಯಕರ್ತರನ್ನು ರೂಪಿಸುವ ಶಿಸ್ತುಬದ್ಧ ಗರಡಿ ಮನೆ. ನೀವು ಹತ್ತಿರಕ್ಕೆ ಬರದೇ ಸಂಘವನ್ನು ನೋಡುವುದು ʼಅಂಧ ಆನೆಯನ್ನು ಮುಟ್ಟಿ ವರ್ಣಿಸಿದಂತಾಗುತ್ತದೆʼ ಆಗುತ್ತದೆ. ಹೀಗಾಗಿ ನೀವು ಸಂಘದ ಶಾಖೆಗೆ ಬನ್ನಿ ಸಂಘದ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ ಎಂದು ಹೇಳಿದ್ದಾರೆ.